ಭೋಪಾಲ್: ಕೊರೊನಾ ಮಹಾಮಾರಿಯಿಂದ ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಆದ್ರೆ ಅವರ ತಂದೆ-ತಾಯಿ ಮಾಡಿದ ಸಾಲವನ್ನು ಈಗ ಮಕ್ಕಳು ಕಟ್ಟುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೆಳಕಿಗೆ ಬಂದಿದೆ.
ಬಾಲಕಿಯ ಪೋಷಕರನ್ನು ಕೊರೊನಾ ಬಲಿ ಪಡೆದಿದೆ. ಆಕೆ ಸದ್ಯ ತನ್ನ 11 ವರ್ಷದ ಕಿರಿಯ ಸಹೋದರ ವಿಯಾನ್ ಜೊತೆ ವಾಸಿಸುತ್ತಿದ್ದಾರೆ. ಆದರೆ, ಅನಾಥಳಾದ ಬಾಲಕಿ ಸದ್ಯ ಸಾಲದ ಸುಳಿಯಲ್ಲಿ ಸಿಲುಕಿದ್ದಾಳೆ. ಸತ್ತ ತಂದೆ ಮಾಡಿದ ಸಾಲವನ್ನು ತೀರಿಸುವಂತೆ ಬ್ಯಾಂಕ್ ಅವಳಿಗೆ ಸೂಚನೆ ನೀಡುತ್ತಿದೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಬಾಲಕಿಯ ಸಮಸ್ಯೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಹಣಕಾಸು ಸಚಿವರ ಮಧ್ಯಸ್ಥಿಕೆಯಿಂದ ಬಾಲಕಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಓದಿ: ಶಿಕ್ಷಕಿ ಕೊಲೆ ಬೆನ್ನಲ್ಲೇ ಬ್ಯಾಂಕ್ ಮ್ಯಾನೇಜರ್ಗೆ ಗುಂಡಿಕ್ಕಿ ಹತ್ಯೆಗೈದ ಉಗ್ರ... ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಳೆದ ವರ್ಷ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಭೋಪಾಲ್‌ನ 17 ವರ್ಷದ ವನಿಶಾ ಪಾಠಕ್‌ನ ಪೋಷಕರು ಕೊರೊನಾದಿಂದ ಸಾವನ್ನಪ್ಪಿದ್ದರು. ಇದರೊಂದಿಗೆ ವನಿಶಾ ಹಾಗೂ ಆಕೆಯ 11 ವರ್ಷದ ಕಿರಿಯ ಸಹೋದರ ಅನಾಥರಾದರು. ಸದ್ಯ ಇಬ್ಬರೂ ಚಿಕ್ಕಪ್ಪನ ಆರೈಕೆಯಲ್ಲಿದ್ದಾರೆ.
ತಂದೆ-ತಾಯಿಯನ್ನು ಕಳೆದುಕೊಂಡು ನೊಂದಿರುವ ವನಿಶಾ ಕಳೆದ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.99.8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ವನಿಶಾ ಅವರ ತಂದೆ ಜಿತೇಂದ್ರ ಪಾಠಕ್ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಜಿತೇಂದ್ರ ಅವರು ಈ ಹಿಂದೆ ಮಾಲೀಕತ್ವಕ್ಕಾಗಿ ಎಲ್‌ಐಸಿಯಿಂದ ಸಾಲ ಪಡೆದಿದ್ದರು. ಆದರೆ, ಜಿತೇಂದ್ರ ಸಾವಿನಿಂದ ಎಲ್ಐಸಿ ವನಿಶಾಗೆ 29 ಲಕ್ಷ ಸಾಲ ಮರುಪಾವತಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದೆ.
ವನಿಶಾ ಮತ್ತು ಆಕೆಯ ಕಿರಿಯ ಸಹೋದರ ಅಪ್ರಾಪ್ತರಾಗಿರುವುದರಿಂದ ಜಿತೇಂದ್ರ ಅವರ ಹೆಸರಿನಲ್ಲಿರುವ ಕಮಿಷನ್, ಸೇವಿಂಗ್ ಮತ್ತು ಪಾಲಿಸಿಗಳನ್ನು ಎಲ್‌ಐಸಿ ನಿರ್ಬಂಧಿಸಿದೆ. ವನಿಶಾಗೆ 18 ವರ್ಷ ತುಂಬಿದ ನಂತರ ಆ ಹಣ ಬರುತ್ತವೆ. ಅಲ್ಲಿಯವರೆಗೂ ಕಾಲಾವಕಾಶ ನೀಡಿ, ತನ್ನ ತಂದೆಯ ಹೆಸರಿನಲ್ಲಿದ್ದ ಆಸ್ತಿ ಕೈ ಸೇರಿದಾಗ ಸಾಲ ಮರುಪಾವತಿಸುವುದಾಗಿ ಎಲ್‌ಐಸಿಗೆ ಪತ್ರ ಬರೆದಿದ್ದಾರೆ ವನಿಶಾ. ಆದರೆ ಆ ಕಡೆಯಿಂದ ಸ್ಪಂದೆನೆ ಸಿಕ್ಕಿಲ್ಲ.
ನಿರ್ಮಲಮ್ಮ ಮಧ್ಯಸ್ಥಿಕೆ: ವನಿಶಾ ಕುರಿತು ಕೆಲವು ಮಾಧ್ಯಮಗಳಲ್ಲಿ ಬಂದಿರುವ ಲೇಖನಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮಕೈಗೊಂಡು ವನಿಶಾಗೆ ಅಪ್ಡೇಟ್ ಮಾಡುವಂತೆ ಹಣಕಾಸು ಸೇವಾ ಇಲಾಖೆ ಮತ್ತು ಎಲ್‌ಐಸಿ ಇಂಡಿಯಾಗೆ ಕೇಂದ್ರ ಸಚಿವರು ಸೂಚಿಸಿದರು. ಹಣಕಾಸು ಸಚಿವರ ಮಧ್ಯಸ್ಥಿಕೆಯಿಂದ ವನಿಶಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಬಾಲಕಿಗೆ 18 ವರ್ಷ ತುಂಬುವವರೆಗೆ ಯಾವುದೇ ನೋಟಿಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಎಲ್ಐಸಿ ಮೂಲಗಳು ತಿಳಿಸಿವೆ.