ಡೆಹ್ರಾಡೂನ್ (ಉತ್ತರಾಖಂಡ್): ಬದ್ರಿ ಕೇದಾರ ದೇವಸ್ಥಾನದ ಗರ್ಭಗುಡಿ ಗೋಡೆಯ ಮೇಲಿರುವ ಬೆಳ್ಳಿ ಹೊದಿಕೆಗಳ ಬದಲಿಗೆ ಚಿನ್ನದ ಹೊದಿಕೆಗಳನ್ನು ಅಳವಡಿಸುವ ಬದ್ರಿ ಕೇದಾರ ದೇವಸ್ಥಾನ ಕಮೀಟಿಯ ನಿರ್ಧಾರ ವಿರೋಧಿಸಿ ಸ್ಥಳೀಯ ಅರ್ಚಕರು ಪ್ರತಿಭಟನೆ ನಡೆಸಿದರು.
ಉದ್ಯಮಿಯೊಬ್ಬರು 230 ಕೆಜಿಯಷ್ಟು ಚಿನ್ನವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುವುದಾಗಿ ಹೇಳಿದ ನಂತರ ಕಮೀಟಿ ಈ ನಿರ್ಧಾರ ಕೈಗೊಂಡಿದೆ. ಆದರೆ ಹಲವಾರು ಸ್ಥಳೀಯ ಅರ್ಚಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಿನ್ನವು ಸಂಪತ್ತು ಮತ್ತು ಪ್ರಾಪಂಚಿಕ ಸಂತೋಷಗಳ ಸಂಕೇತವಾಗಿದೆ. ಆದರೆ ಭೌತಿಕ ಪ್ರಪಂಚದಿಂದ ಪ್ರತ್ಯೇಕತೆಯನ್ನು ಸೂಚಿಸುವ ದೇವಾಲಯದ ಪ್ರಾಚೀನ ಮೌಲ್ಯಗಳಿಗೆ ಇದು ವಿರುದ್ಧವಾಗಿದೆ ಎಂದು ಅವರು ಹೇಳುತ್ತಾರೆ.
ಇದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ನಾಲ್ಕು ಸ್ತಂಭಗಳಲ್ಲಿ ದೇವರಿದ್ದಾರೆ. ನಾವು ಇದಕ್ಕೆ ಅನುಮತಿ ನೀಡಲ್ಲ. ಅವರು ನಮ್ಮ ಮಾತು ಕೇಳದಿದ್ದರೆ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಪಂಡಿತ್ ವಿನೋದ್ ಪ್ರಸಾದ್ ಶುಕ್ಲಾ ಹೇಳಿದ್ದಾರೆ.
ಕಮಿಟಿಯು ಸಂಪೂರ್ಣ ಸ್ಪಷ್ಟನೆ ನೀಡುವವರೆಗೆ ಗರ್ಭಗುಡಿ ಮುಚ್ಚಲಾಗುವುದು ಎಂದು ಇತರ ಅರ್ಚಕರು ತಿಳಿಸಿದ್ದಾರೆ. ಚಿನ್ನದ ಹೊದಿಕೆಗಳನ್ನು ಅಳವಡಿಸುವ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಅವರು ಈ ಬಗ್ಗೆ ಸಂಪೂರ್ಣವಾಗಿ ತಿಳಿಸುವವರೆಗೂ ಗರ್ಭಗುಡಿ ಮುಚ್ಚಿರುತ್ತದೆ ಎಂದು ಪಂಡಿತ್ ಸಂತೋಷ್ ತ್ರಿವೇದಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಕಮೀಟಿ ಅಧ್ಯಕ್ಷ ಅಜೇಂದರ್ ಅಜಯ್, ಈ ವಿಷಯದ ಬಗ್ಗೆ ಕೆಲ ಗೊಂದಲಗಳಿದ್ದವು. ಅವನ್ನೆಲ್ಲ ಪರಿಹರಿಸಲಾಗಿದೆ. ದೇವಸ್ಥಾನದ ಗರ್ಭಗುಡಿಯೊಳಗೆ ಏನೋ ಮಾರ್ಪಾಟು ಮಾಡಲಾಗುತ್ತಿದೆ ಎಂದು ಕೆಲವರು ತಿಳಿದಿದ್ದರು. ಆದರೆ, ನಾವು ಅವರ ತಪ್ಪು ಕಲ್ಪನೆಗಳನ್ನು ನಿವಾರಿಸಿದ್ದೇವೆ. ಬೆಳ್ಳಿಯ ಹೊದಿಕೆಗಳನ್ನು ತೆಗೆದು ಚಿನ್ನದ ಹೊದಿಕೆಗಳನ್ನು ಅಳವಡಿಸುತ್ತಿದ್ದೇವಷ್ಟೇ ಎಂದು ಹೇಳಿದರು.
ಇಡೀ ಪ್ರಕ್ರಿಯೆಯನ್ನು ತಜ್ಞರು ಮತ್ತು ಪುರಾತತ್ವಶಾಸ್ತ್ರಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸೋಮನಾಥ ದೇವಾಲಯದಲ್ಲಿ ಚಿನ್ನದ ಹೊದಿಕೆಗಳಿವೆ. ಕಾಶಿ ವಿಶ್ವನಾಥ ದೇವಾಲಯವು ಚಿನ್ನದ ದೇವಾಲಯ ಮತ್ತು ಗರ್ಭಗುಡಿ ಹೊಂದಿದೆ. ಇತಿಹಾಸ ಉದ್ದಕ್ಕೂ ಈ ಪ್ರಾಚೀನ ದೇವಾಲಯಗಳು ಸಮೃದ್ಧವಾಗಿವೆ. ಚಿನ್ನದ ಹೊದಿಕೆಯಿಂದ ಯಾವುದೇ ಧಾರ್ಮಿಕ ಮೌಲ್ಯಗಳು ಬದಲಾಗಲ್ಲ ಅಥವಾ ಈ ಕ್ರಮ ಯಾವುದೇ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಕೇದಾರನಾಥನಲ್ಲಿ ಮೋದಿ.... ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ