ನವದೆಹಲಿ: 2019ರಲ್ಲಿ ಲೋಕಸಭೆಯಲ್ಲಿ ಪಾಸ್ ಆಗಿದ್ದ ಅಣೆಕಟ್ಟು ಸುರಕ್ಷತಾ ಮಸೂದೆ ಇಂದು ರಾಜ್ಯಸಭೆಯಲ್ಲೂ ಪಾಸ್ ಆಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿವೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಂದು ರಾಜ್ಯಸಭೆಯಲ್ಲಿ ಅಣೆಕಟ್ಟು ಸುರಕ್ಷತಾ ಮಸೂದೆ 2019'ಯನ್ನು ಹೆಚ್ಚಿನ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಗದ್ದಲ ಮಾಡಿದ್ದು, ಸುರಕ್ಷತೆ ದೃಷ್ಟಿಯಿಂದ ಈ ಬಿಲ್ ಆಯ್ಕೆ ಸಮಿತಿ ಶಿಪಾರಸಿಗೆ ಕಳುಹಿಸುವಂತೆ ಪಟ್ಟು ಹಿಡಿದವು.
ಅಣೆಕಟ್ಟು ವೈಫಲ್ಯ ಸಂಬಂಧಿತ ಸಮಸ್ಯೆ ತಡೆಗಟ್ಟಲು ಮತ್ತು ಅವುಗಳ ಸುರಕ್ಷಿತ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಜೊತೆಗೆ ಕಣ್ಗಾವಲು, ತಪಾಸಣೆಮ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿ ಈ ನಿರ್ಧಾರ ಕೈಗೊಳ್ಳುವಂತ ಪಟ್ಟು ಹಿಡಿದವು.
ಕಾಂಗ್ರೆಸ್, ಟಿಎಂಸಿ ಮತ್ತು ಡಿಎಂಕೆ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಒತ್ತಾಯ ಮಾಡಿದ್ದು, ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಬಿಲ್ ಮಂಡನೆಯಾಗುತ್ತಿದ್ದಂತೆ ಡಿಎಂಕೆ ಸಂಸದ ಟಿ. ಶಿವ, ಆಯ್ಕೆ ಸಮಿತಿಗೆ ಕಳುಹಿಸುವಂತೆ ನೋಟಿಸ್ ನೀಡಿದರು. ಕೇಂದ್ರ ಸರ್ಕಾರದ ಈ ಮಸೂದೆ ಅನೇಕ ರಾಜ್ಯಗಳ ಅಧಿಕಾರ ಉಲ್ಲಂಘನೆ ಮಾಡ್ತಿದೆ ಎಂದರು.