ನವದೆಹಲಿ: ಈ ಬಜೆಟ್ ಶ್ರೀಮಂತರ ಬಜೆಟ್ ಆಗಿದ್ದು, ಬಡವರಿಗೆ ಇದರಲ್ಲಿ ಏನೂ ಇಲ್ಲ. ಅರ್ಜುನ ಮತ್ತು ದ್ರೋಣಾಚಾರ್ಯರ ಬಜೆಟ್ ಇದ್ದಾಗಿದ್ದು, ಏಕಲವ್ಯನ(ಮಹಾಭಾರತ) ಬಜೆಟ್ ಅಲ್ಲ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕ್ರಿಪ್ಟೋ ಕರೆನ್ಸಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಯಾವುದೇ ಕಾನೂನು ಆಯಾಮಗಳು ಇಲ್ಲ. ಈ ಹಿಂದೆ ಇದರ ಬಗ್ಗೆ ಚರ್ಚೆಯೂ ಮಾಡಿಲ್ಲ. ಅವರ ಸ್ನೇಹಿತರಿಗೆ ಉಪಯೋಗವಾಗುವಂತಹ ಬಜೆಟ್ ಇದು ಎಂದು ಖರ್ಗೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಇದೊಂದು ದಿಕ್ಕಿಲ್ಲದ ಬಜೆಟ್. ರೈತರು, ಮಹಿಳೆಯರು ಹಾಗೂ ಯುವ ಜನತೆಗೆ ಏನೂ ಕೊಟ್ಟಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲು ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನವೇ ನೀಡಿಲ್ಲ ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಕಿಡಿಕಾರಿದ್ದಾರೆ.
ಏರುತ್ತಿರುವ ಹಣದುಬ್ಬರದಿಂದ ಬಳಲುತ್ತಿರುವ ಬಡವರು, ಸಾಮಾನ್ಯ ಜನರು ಹಾಗೂ ತೆರಿಗೆದಾರರಿಗೆ ಬಜೆಟ್ ಪರಿಹಾರ ನೀಡುತ್ತೆ ಎಂಬ ಇವರ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಕೇಂದ್ರ ಮಾಜಿ ವಾಣಿಜ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ತಿಳಿಸಿದ್ದಾರೆ. ಹೆಚ್ಚುತ್ತಿರುವ ಅಸಮಾನತೆಯನ್ನು ಪರಿಹರಿಸಿಲ್ಲ. ಈ ಬಜೆಟ್ ಸಣ್ಣ ಕೈಗಾರಿಕೆಗಳಿಗೂ ಪರಿಹಾರ ನೀಡಿಲ್ಲ ಎಂದು ಹೇಳಿದ್ದಾರೆ.
ಡಿಜಿಟಲ್ ಕರೆನ್ಸಿಗೆ ತರೂರ್ ಬೆಂಬಲ..!
ಡಿಜಿಟಲ್ ಕರೆನ್ಸಿ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡಿದ್ದು, ಇದನ್ನು ಪರಿಚಯಿಸುವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದನ್ನು ನಾವ್ಯಾರು ಟೀಕಿಸುತ್ತೇವೆ ಎಂದು ಭಾವಿಸುವುದಿಲ್ಲ. ಆದರೆ, ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಯಾವುದೇ ಯೋಜನೆ ನೀಡದಿರುವುದು ಬೇಸರ ತರಿಸಿದೆ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಎನ್‌ಡಿಎ ಮೈತ್ರಿ ಪಕ್ಷಗಳ ಸಚಿವರು, ಬಿಜೆಪಿ ಸಂಸದರು, ಕೇಸರಿ ಪಕ್ಷ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಇಂದಿನ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದ ಬೆಳವಣಿಗೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ