ನವದೆಹಲಿ : ದಕ್ಷಿಣ ದೆಹಲಿಯ ಐಟಿಬಿಪಿ ಕೋವಿಡ್ ಕೇರ್ ಸೆಂಟರ್ನಲ್ಲಿ ಒಟ್ಟು 500 ಆಮ್ಲಜನಕ ಹಾಸಿಗೆಗಳಿವೆ. ಆದ್ರೆ, ಕೊರೊನಾ ಹೆಚ್ಚಿನವರಿಗೆ ಬಾಧಿಸುತ್ತಿದ್ದು, ಬೆಡ್ ಹಾಗೂ ಆಕ್ಸಿಜನ್ನ ಕೊರತೆ ಉಂಟಾಗಬಹುದು ಎಂದು ಗಡಿ ಕಾವಲು ಪಡೆ ತಿಳಿಸಿದೆ.
ಈ ಭಾಗದಲ್ಲಿ ಕೊರೊನಾ ರೋಗಿಗಳ ಒಳಹರಿವು ಭಾರೀ ಪ್ರಮಾಣದಲ್ಲಿದೆ. ರೋಗಿಗಳ ಪ್ರವೇಶ ಹೆಚ್ಚಾದಂತೆ ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುವಂತೆ ದೆಹಲಿ ಸರ್ಕಾರವನ್ನು ಅರೆಸೇನಾ ಪಡೆ ಕೋರಿದೆ.
ದಕ್ಷಿಣ ದೆಹಲಿಯ ಛತ್ತರ್‌ಪುರ ಪ್ರದೇಶದ ರಾಧಾ ಸೋಮಿ ಬಿಯಾಸ್‌ನಲ್ಲಿರುವ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರದ ಇತ್ತೀಚಿನ ಮಾಹಿತಿಯ ಪ್ರಕಾರ, ಏಪ್ರಿಲ್ 26ರಂದು ಕಾರ್ಯಾಚರಣೆ ಆರಂಭಿಸಿದ ಬಳಿಕ ಒಟ್ಟು 176 ರೋಗಿಗಳನ್ನು ಕೇಂದ್ರದಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಇದರಲ್ಲಿ 122 ಪುರುಷರು ಹಾಗೂ 54 ಮಹಿಳಾ ರೋಗಿಗಳು ಇದ್ದಾರೆ.
ಮಾಹಿತಿಯ ಪ್ರಕಾರ ಒಟ್ಟು 164 ಹಾಸಿಗೆಗಳು ಅಲ್ಲಿವೆ. ಮತ್ತೆ ಉಳಿದ ಒಂಬತ್ತು ರೋಗಿಗಳನ್ನು ಹೊರಗಿನ ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಲ್ಲದೆ ಎಂಟು ರೋಗಿಗಳು ಅಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬಹುತೇಕ ಎಲ್ಲ ರೋಗಿಗಳಿಗೆ ನಿರಂತರ ಆಮ್ಲಜನಕದ ಅವಶ್ಯಕತೆಯಿದೆ ಎಂದು ಅರೆಸೈನಿಕ ಪಡೆ ಹೇಳಿದೆ. ಆದರೆ, ಎಸ್‌ಪಿಸಿಸಿಯು, ಪ್ರಸ್ತುತ, ಕೇವಲ ಆಕ್ಸಿಜನ್ ಬೆಡ್ಗಳನ್ನು ಮಾತ್ರ ಹೊಂದಿದೆ. ಇಲ್ಲಿ ಐಸಿಯು ಮತ್ತು ವೆಂಟಿಲೇಟರ್ಗಳ ಯಾವುದೇ ಸೌಲಭ್ಯಗಳಿಲ್ಲ.
ಆದ್ರೆ, ಈ ಕೇಂದ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ, ಔಷಧಿ ಮತ್ತು ಆಹಾರವನ್ನು ಉಚಿತವಾಗಿ ನೀಡಲಾಗುವುದು ಎಂದು ಐಟಿಬಿಪಿ ಹೇಳಿದೆ. ಅದರ ವೆಚ್ಚವನ್ನು ದೆಹಲಿ ಸರ್ಕಾರವೇ ಭರಿಸುತ್ತದೆ.
ದೆಹಲಿಯ ಪ್ರಸ್ತುತ ಪರಿಸ್ಥಿತಿಯು ತೀರಾ ಗಂಭೀರವಾಗಿದೆ. ಕೊರೊನಾ ರೋಗಿಗಳು ಆಕ್ಸಿಜನ್ ಬೆಡ್ಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ಸೋಂಕುಗಳ ನಡುವೆ ಐಸಿಯು ಸೌಲಭ್ಯಗಳ ಕೊರತೆಯೂ ಕಾಡಿದೆ.