ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇಲ್ಲೊಬ್ಬರು ಈ ನಡುವೆಯೇ ಆನ್ಲೈನ್ನಲ್ಲೇ ತಮ್ಮ ಮದುವೆ ಮುಗಿಸಿಕೊಂಡಿದ್ದಾರೆ. ಶಿಮ್ಲಾದ ಆಶಿಶ್ ಸಿಂಘಾ ಹಾಗೂ ಕುಲುವಿನ ಶಿವಾನಿ ಠಾಕೂರ್ ಆನ್‌ಲೈನ್‌ನಲ್ಲಿ ಮದುವೆಯಾದವರು. ಸದ್ಯ ಈ ಮದುವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಿಮಾಚಲದಲ್ಲೊಂದು ವಿಶಿಷ್ಟ ಮದುವೆ: ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಶಿಮ್ಲಾ ಜಿಲ್ಲೆಯ ಕೋಟ್‌ಗಢ ನಿವಾಸಿ ಆಶಿಶ್ ಸಿಂಘಾ ಮತ್ತು ಕುಲು ಜಿಲ್ಲೆಯ ಭುಂತರ್ ನಿವಾಸಿ ಶಿವಾನಿ ಅವರ ವಿವಾಹ ಜುಲೈ 10ರ ಸೋಮವಾರ ನಿಗದಿಯಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಎಲ್ಲರೂ ಮದುವೆ ಕ್ಯಾನ್ಸಲ್ ಆಗಬಹುದು ಎಂದೇ ಊಹಿಸಿದ್ದರು. ಆದರೆ ವಿಶೇಷ ಏನಪ್ಪಾ ಅಂದ್ರೆ ಇಷ್ಟೆಲ್ಲ ಮಳೆ, ಅವಾಂತರದ ನಡುವೆಯೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಜೋಡಿ ಆನ್‌ಲೈನ್‌ನಲ್ಲಿ ಮದುವೆ ಶಾಸ್ತ್ರ ಮುಗಿಸಿಕೊಂಡಿದ್ದು, ಈಗ ಭಾರಿ ಚರ್ಚೆಯಲ್ಲಿದೆ.
ಆನ್‌ಲೈನ್ ಮದುವೆ: ವಿಶೇಷವೆಂದರೆ ಈ ಮದುವೆಯಲ್ಲಿ ವಧು - ವರರು ಸಪ್ತಪದಿ ತುಳಿಯಲಿಲ್ಲ, ಹೋಮಕುಂಡದ ಸುತ್ತ ಸುತ್ತು ಹಾಕಿಲ್ಲ, ವಧುವಿನ ಹಣೆಗೆ ಮದುಮಗ ಕುಂಕುಮ ಇಟ್ಟಿಲ್ಲ. ಕೊಬೆಗೆ ವರ ವಧುವಿಗೆ ಮಂಗಳಸೂತ್ರವನ್ನೇ ಕಟ್ಟಿಲ್ಲ. ಆದರೂ ಇಬ್ಬರು ಗಂಡ ಹೆಂಡತಿಯಾಗಿದ್ದಾರೆ. ಹೇಗೆಂದರೆ ಈ ಮದುವೆ ಆನ್‌ಲೈನ್‌ನಲ್ಲಿ ನಡೆದಿದೆ. ಪುರೋಹಿತರು ವಿಡಿಯೋ ಕಾಲ್ ಮೂಲಕ ವಧು-ವರರನ್ನು ಪರಸ್ಪರ ಎದುರು ಕೂರುವಂತೆ ಮಾಡಿ ಮಂತ್ರ ಪಠಿಸಿ ಮದುವೆ ಮಾಡಿದ್ದಾರೆ. ಎಲ್ಲ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಲಾಗಿದೆ.
ಮಳೆಯಿಂದಾಗಿ ಹಿಮಾಚಲ ಪ್ರದೇಶದ ರಸ್ತೆಗಳು ಬಂದ್ ಆಗಿವೆ. ಈ ಮಳೆಗಾಲದಲ್ಲಿ ಮೆರವಣಿಗೆ ನಡೆಸುವುದು ಅಸಾಧ್ಯವಾಗಿತ್ತು. ಹೀಗಿರುವಾಗ ಮದುವೆ ಕ್ಯಾನ್ಸಲ್ ಮಾಡುವ ಬದಲು ಆನ್‌ಲೈನ್ ಮ್ಯಾರೇಜ್ ಮಾಡುವ ಯೋಚನೆ ಬಂತು. ನಂತರ ಎರಡೂ ಕುಟುಂಬಗಳಲ್ಲಿ ಒಪ್ಪಿಗೆ ಸಿಕ್ಕಿದ್ದು, ವಧು - ವರರು ಆನ್‌ಲೈನ್‌ನಲ್ಲಿ ವಿವಾಹವಾಗಿದ್ದಾರೆ. ಅಂತರ್ಜಾಲದ ನೆರವಿನಿಂದ ಈ ಆನ್‌ಲೈನ್ ಮದುವೆ ಯಾವುದೇ ಅಡೆತಡೆಯಿಲ್ಲದೆ ನಡೆದಿದೆ ಎಂದು ವಧುವರರ ಸಂಬಂಧಿಕರು ತಿಳಿಸಿದ್ದಾರೆ.
ಮದುವೆಯಲ್ಲಿ ಭಾಗಿಯಾಗಿದ್ದ ರಾಕೇಶ್ ಸಿಂಘಾ: ಈ ವಿಶಿಷ್ಟ ಮದುವೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಮಾಡಲಾಗಿದೆ. ಇದರಲ್ಲಿ ವರನು ಹೋಟೆಲ್‌ನಲ್ಲಿ ಸಿದ್ಧವಾಗಿ ಕುಳಿತಿರುವುದು ಮತ್ತು ಅವನ ಸಂಬಂಧಿಕರು ಮತ್ತು ಇತರ ಜನರು ಸಹ ಅವನೊಂದಿಗೆ ಉಪಸ್ಥಿತರಿರುವುದು ಕಂಡು ಬರುತ್ತದೆ. ಈ ವಿಡಿಯೋದಲ್ಲಿ ಸಿಪಿಐ(ಎಂ)ನ ಮಾಜಿ ಶಾಸಕ ರಾಕೇಶ್ ಸಿಂಗ್ ಕೂಡ ಇದ್ದಾರೆ. ಈ ಆನ್‌ಲೈನ್ ಮದುವೆಯಲ್ಲಿ ಅವರೂ ಭಾಗವಹಿಸಿದ್ದರು. ಒಂದು ವರ್ಷದಿಂದ ಅದ್ಧೂರಿಯಾಗಿ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಆದರೆ ಮಳೆಯಿಂದಾಗಿ ಮದುವೆಯ ಎಲ್ಲ ಸಿದ್ಧತೆಗಳೂ ಧ್ವಂಸಗೊಂಡಿವೆ.
ಇದನ್ನೂ ಓದಿ: ಕಲಬುರಗಿ: ಮಳೆಗಾಗಿ ಪ್ರಾರ್ಥಿಸಿ ಗೊಂಬೆಗಳಿಗೆ ಶಾಸ್ತ್ರೋಕ್ತ ಮದುವೆ