ತಿರುವನಂತಪುರಂ: ಡಿಸೆಂಬರ್ 31ರಿಂದ ಪ್ರಾರಂಭವಾಗಲಿರುವ ಮಕರವಿಳಕ್ಕು ಹಬ್ಬದ ನಿಮಿತ್ತ ಭಕ್ತರು ಇಂದಿನಿಂದ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಪ್ರತಿ ದಿನ 5 ಸಾವಿರ ಭಕ್ತರಿಗೆ ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗಿದ್ದು, ಈ ಹಿನ್ನೆಲೆ ದೇವಾಲಯದ ಪ್ರಾಧಿಕಾರ ಇಂದಿನಿಂದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ.
ಯಾತ್ರಿಕರು ಜನವರಿ 7ರವರೆಗೆ ವರ್ಚುವಲ್ ಕ್ಯೂ ಸ್ಲಾಟ್‌ಗಳನ್ನು ದರ್ಶನಕ್ಕಾಗಿ ಕಾಯ್ದಿರಿಸಬಹುದು ಎಂದು ತಿಳಿಸಿರುವ ದೇವಾಲಯದ ಪ್ರಾಧಿಕಾರ, ವರ್ಚುಯಲ್ ಬುಕ್ಕಿಂಗ್ ವ್ಯವಸ್ಥೆಯನ್ನು ಕ್ಲೋಸ್ ಮಾಡಲಾಗುತ್ತದೆ ಎಂದಿದೆ. ಅಲ್ಲದೇ ಜಾರಿಯಾದ ಹೊಸ ನಿಯಮಗಳ ಬಗ್ಗೆಯೂ ತಿಳಿಸಿದೆ.
ಇದನ್ನೂ ಓದಿ : ಶಬರಿಮಲೆ ವಾರ್ಷಿಕ ಮಂಡಲ ಪೂಜೆ ಸಂಪನ್ನ; ಡಿ.30ಕ್ಕೆ ಮತ್ತೆ ಬಾಗಿಲು ತೆರೆಯಲಿದೆ ದೇವಸ್ಥಾನ
ದಿನಕ್ಕೆ 5000 ಯಾತ್ರಾರ್ಥಿಗಳು ಮಾತ್ರ ದೇವಸ್ಥಾನಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿರುವ ದೇವಾಲಯದ ಪ್ರಾಧಿಕಾರ, ದೇವರ ದರ್ಶನಕ್ಕಾಗಿ ಬರುವ ಎಲ್ಲ ಭಕ್ತರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂದಿದೆ. ಅಲ್ಲದೇ ದೇವಾಲಯ ವರದಿ ಮಾಡಿದ ಸಮಯದಿಂದ 48 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆ ಮಾಡಿಸಿರುವ ನೆಗೆಟಿವ್ ಪ್ರಮಾಣಪತ್ರಗಳನ್ನು ತರಬೇಕು. ನೆಗೆಟಿವ್ ಪ್ರಮಾಣಪತ್ರಗಳನ್ನು ನೀಡದೇ ದೇವಾಲಯಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಆರ್‌ಟಿ-ಪಿಸಿಆರ್ ಪ್ರಮಾಣ ಪತ್ರವನ್ನು 48 ಗಂಟೆ ಒಳಗೆ ಪಡೆದಿರಲೇಬೇಕು. ಅದಕ್ಕೂ ಮುನ್ನ ಪಡೆದ ಪ್ರಮಾಣಪತ್ರವನ್ನು ಮಾನ್ಯ ಮಾಡುವುದಿಲ್ಲ ಎಂದಿದೆ. ಹಾಗಾಗಿ ಭಕ್ತರು ಆರ್‌ಟಿ-ಪಿಸಿಆರ್ ಪರೀಕ್ಷೆಗೊಳಗಾವುದು ಅನಿವಾರ್ಯ.