ತಿರುವನಂತಪುರಂ (ಕೇರಳ): ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಪ್ರಸಾದವನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬಹುದಾಗಿದೆ. ನವೆಂಬರ್ 7 ರಿಂದ ಆನ್ಲೈನ್ ಬುಕ್ಕಿಂಗ್ ಆರಂಭವಾಗಿದ್ದು, ಅಂಚೆ ಮೂಲಕ ಪ್ರಸಾದದ ಕಿಟ್ ಮನೆಗಳಿಗೆ ತಲುಪುತ್ತದೆ.
ಭಕ್ತರು ದೇಶದ ಯಾವುದೇ ಅಂಚೆ ಕಚೇರಿಯಿಂದ ಇ-ಪಾವತಿ ಮೂಲಕ ಪ್ರಸಾದವನ್ನು ಕಾಯ್ದಿರಿಸಬಹುದು. 450 ರೂ. ಬೆಲೆಯ ಪ್ರಸಾದದ ಕಿಟ್ನಲ್ಲಿ ಅರವಾಣ, ತುಪ್ಪ, ಅರಿಶಿಣ, ಕುಂಕುಮ, ವಿಭೂತಿ ಇರಲಿದೆ.
ಬುಕ್ ಮಾಡಿದವರಿಗೆ ನವೆಂಬರ್ 16 ರಿಂದ ಕಿಟ್‌ಗಳನ್ನು ಕಳುಹಿಸಲು ಪ್ರಾರಂಭಿಸಲಾಗುವುದು. ಮೂರು ದಿನಗಳಲ್ಲಿ ಪ್ರಸಾದ ಭಕ್ತರ ಮನೆ ತಲುಪಲಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಇನ್ನು ನವೆಂಬರ್ 15 ರಿಂದ ಜನವರಿ 20ರ ವರೆಗೆ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಆದರೆ ಕೋವಿಡ್ ಹಿನ್ನೆಲೆ ಈ ಬಾರಿ ಸೀಮಿತ ಸಂಖ್ಯೆಯ ಭಕ್ತರು, ಯಾತ್ರಾರ್ಥಿಗಳಿಗೆ ಅವಕಾಶ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.