ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಇತ್ತೀಚೆಗಷ್ಟೇ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದು, ಮಾಸುವ ಮುನ್ನವೇ ಕೋರ್ಟ್‌ನಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿಬಂದಿದೆ. ಲ್ಯಾಪ್ಟಾಪ್ ಸ್ಫೋಟಗೊಂಡು ಓರ್ವ ತೀವ್ರವಾಗಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.
ಇಂದು ಬೆಳಗ್ಗೆ ಎಂದಿನಂತೆ ಕೋರ್ಟ್ ಕಲಾಪಗಳು ನಡೆಯುತ್ತಿದ್ದ ವೇಳೆ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಈ ವೇಳೆ ಅಲ್ಲಿದ್ದ ಜನರು ಭಯಭೀತರಾಗಿದ್ದರು. ಬಳಿಕ ಸ್ಫೋಟದ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ತಪಾಸಣೆ ನಡೆಸಿದ ಬಳಿಕ ಕೋರ್ಟ್ನ 12ನೇ ಕೊಠಡಿಯಲ್ಲಿ ಲ್ಯಾಪ್ಟಾಪ್ ಸ್ಫೋಟಗೊಂಡಿದ್ದು ಖಚಿತವಾಗಿದೆ.
ಸ್ಫೋಟ ತೀವ್ರತೆಗೆ ವ್ಯಕ್ತಿಯೊಬ್ಬ ತೀವ್ರ ಗಾಯಗೊಂಡಿದ್ದಾನೆ. ಬಳಿಕ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಾಗಿದೆ. ಸ್ಫೋಟದ ಬಳಿಕ ಎಲ್ಲಾ ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲಿದ್ದವರು ಹೆದರಿದ್ದ ಕಾರಣ ಪರಿಸ್ಥಿತಿ ನಿಭಾಯಿಸಿ ಎಲ್ಲರನ್ನೂ ಕೋರ್ಟ್ನಿಂದ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಕೋರ್ಟ್‌ನಲ್ಲಿ ಸೆಪ್ಟೆಂಬರ್ 24 ರಂದು ವಕೀಲರ ವೇಷದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹಲವು ಜನರನ್ನು ಬಲಿ ಪಡೆದಿದ್ದರು. ಈ ಭಯಾನಕ ಘಟನೆ ಮಾಸುವ ಮುನ್ನವೇ ಕೋರ್ಟ್‌ನಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿಬಂದಿದ್ದರಿಂದ ಜನರು ತಲ್ಲಣಗೊಂಡಿದ್ದರು.