ಹೈದರಾಬಾದ್(ತೆಲಂಗಾಣ): ಕೆಲವೊಮ್ಮೆ ನಡೆಯುವ ಸಣ್ಣ ನಿರ್ಲಕ್ಷ್ಯವೂ ಕೂಡ ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಬಲ್ಲದು. ಇದಕ್ಕೊಂದು ಜ್ವಲಂತ ನಿದರ್ಶನ ಹೈದರಾಬಾದ್ನಲ್ಲಿ ನಡೆದಿರುವ ಈ ದುರ್ಘಟನೆ.
ಅಪಾರ್ಟ್ಮೆಂಟ್ ಸಮುಚ್ಛಯದ ಮುಂದೆ ನಿಲ್ಲಿಸಿದ್ದ ಕಾರನ್ನು ಪಾರ್ಕ್ ಮಾಡಲು ತೆಗೆಯುತ್ತಿದ್ದ ವೇಳೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಹೈದರಾಬಾದ್ನ ಎಲ್.ಬಿ.ನಗರದ ಮನ್ಸೂರಾಬಾದ್ನಲ್ಲಿ ಈ ಘಟನೆ ನಡೆದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿವರ:
ಸಂಗಾರೆಡ್ಡಿ ಜಿಲ್ಲೆಯ ಲಕ್ಷ್ಮಣ್ ಹಾಗು ರಾಣಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದೆ. ಕಳೆದೊಂದು ವರ್ಷದ ಹಿಂದೆ ಕುಟುಂಬಸಮೇತ ನಗರಕ್ಕೆ ವಲಸೆ ಬಂದು ಇವರು ವಾಸವಾಗಿದ್ದರು. ಲಕ್ಷ್ಮಣ್ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾರೆ. ಪತ್ನಿಗೆ ಎಲ್.ಬಿ.ನಗರದ ಮನ್ಸೂರಾಬಾದ್ನ ಅಪಾರ್ಟ್ಮೆಂಟ್ನಲ್ಲಿ ಕೆಲಸ. ಇಂದು ಬೆಳಗ್ಗೆ ಲಕ್ಷ್ಮಣ್ ಅಪಾರ್ಟ್ಮೆಂಟ್ ಮುಂದೆ ನಿಲ್ಲಿಸಿದ್ದ ಕಾರನ್ನು ಒಳಗಡೆ ಪಾರ್ಕ್ ಮಾಡಲು ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಮಗು ಕಾರಿನ ಬಳಿ ನಡೆದುಕೊಂಡು ಹೋಗಿದೆ. ಇದನ್ನು ಗಮನಿಸದ ಲಕ್ಷ್ಮಣ್ ದಿಢೀರ್ ಕಾರನ್ನು ಮುಂದಕ್ಕೆ ತೆಗೆದರು. ಪರಿಣಾಮ, ಪುಟಾಣಿ ಕಾರಿನ ಚಕ್ರದಡಿ ಸಿಲುಕಿಕೊಂಡಿತು.
ಇದನ್ನೂ ಓದಿ: ಪ್ರಾಣ ತೆಗೆಯಲು ಅಲ್ಲ, ಪ್ರಾಣ ರಕ್ಷಣೆಗೆ ಕಾರು ಅಪಘಾತ ಮಾಡಿಸಿದ ಚಾಲಕ: ವಿಡಿಯೋ ನೋಡಿ
ಈ ವೇಳೆ, ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲೇ ಮಗು ಸಾವನ್ನಪ್ಪಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.