ಹೈದರಾಬಾದ್: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಯಾವುದೇ ವಸ್ತುಗಳನ್ನು ಪಡೆಯಬೇಕಾದರೆ ಜಿಎಸ್‌ಟಿ, ಸಾಗಣೆ, ಪ್ಯಾಕಿಂಗ್ ಮತ್ತು ಡೆಲಿವರಿ ಶುಲ್ಕಗಳು ಸೇರಿದಂತೆ ದುಬಾರಿ ಬೆಲೆಯಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಹೊಸ ಉಪಕ್ರಮವನ್ನು ಜಾರಿಗೆ ತಂದಿದೆ. ಇದರಿಂದ ಗ್ರಾಹಕರು ತಮಗೆ ಬೇಕಾದ ಫುಡ್, ಕ್ಯಾಬ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಗದಿತ ದರಕ್ಕೆ ಕನಿಷ್ಠ ಶುಲ್ಕದೊಂದಿಗೆ ಮನೆ ಬಾಗಿಲಲ್ಲಿ ಸ್ವೀಕರಿಸಬಹುದಾಗಿದೆ.
ಹೌದು, ಒಎನ್ಡಿಸಿ (ಓಪನ್ ನೆಟ್ವರ್ಕ್ ಡಿಜಿಟಲ್ ಕಾಮರ್ಸ್, Open Network Digital Commerce -ONDC) ವೇದಿಕೆ ಮೂಲಕ ಹೆಚ್ಚಿನ ಆರ್ಥಿಕ ಹೊರೆ ಇಲ್ಲದೇ ಆನ್‌ಲೈನ್ ಡೆಲಿವರಿಗಳನ್ನು ಪಡೆಯುಬಹುದು. ಡಿಪಿಐಐಟಿ (ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, Department for Promotion of Industry and Internal Trade - DPIIT) ಸಹಯೋಗದಲ್ಲಿ ಕಾರ್ಯ ನರ್ವಹಿಸುತ್ತದೆ. ಇದರ ಮುಖ್ಯ ಉದ್ದೇಶ ಗ್ರಾಹಕರಿಗೆ ನಿಗದಿತ ಬೆಲೆಯಲ್ಲಿ ಸೇವೆಗಳನ್ನು ಒದಗಿಸುವುದಾಗಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೂ ಉತ್ತೇಜನ ಸಿಗಲಿದೆ.
ಪ್ರಯೋಜನೆ ಹೇಗೆ?: ಹೈದರಾಬಾದ್‌ನ ಯಾವುದೇ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಸುಮಾರು 250 ರೂ. ಗೆ ಬಿರಿಯಾನಿ ಸಿಗುತ್ತದೆ. ಇದನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲು ಜಿಎಸ್‌ಟಿ, ಸಾಗಣೆ, ಇಂಟರ್ನೆಟ್ ನಿರ್ವಹಣೆ, ಪ್ಯಾಕಿಂಗ್ ಹಾಗೂ ಡೆಲಿವರಿ ಶುಲ್ಕ ಸೇರಿದಂತೆ ಕನಿಷ್ಠ 300 ರೂ. ಆಗಲಿದೆ. ತುಂಬಾ ದೂರದಿಂದ ಡೆಲಿವರಿ ಪಡೆಯಬೇಕಾದರೆ ಹೆಚ್ಚುವರಿಯಾಗಿ 30 ರೂ.ಗಳನ್ನಾದರೂ ಪಾವತಿಸಬೇಕಾಗುತ್ತದೆ.
ಮತ್ತೊಂದೆಡೆ, ತುರ್ತು ಸಂದರ್ಭಕ್ಕೆ ಖಾಸಗಿ ಕ್ಯಾಬ್ ಬುಕ್ ಮಾಡಿದರೆ ಪೀಕ್ ಆ್ಯಂಡ್ ಸರ್ಜ್ ಅವರ್ ಹೆಸರಿನಲ್ಲಿ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಇಂತಹ ಅನೇಕ ನಿರ್ದಶನಗಳನ್ನು ನಿತ್ಯವೂ ನೋಡಬಹುದು. ಹೀಗೆ, ನಿಯಂತ್ರಣ ಮತ್ತು ಕಣ್ಗಾವಲು ಇಲ್ಲದ ಇಂತಹ ವ್ಯವಸ್ಥೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. ಆದರೆ, ಒಎನ್ಡಿಸಿ ಮೂಲಕ ಆರ್ಡರ್ ಮಾಡಿದರೆ ಹೆಚ್ಚುವರಿ ಶುಲ್ಕಗಳ ಹೊರೆ ಗ್ರಾಹಕರಿಗೆ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ.
ಉದಾಹರಣೆಗೆ ಹೈದರಾಬಾದ್‌ನ ಯಾವುದೇ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಚಿಕನ್ ಬಿರಿಯಾನಿಗೆ 300 ರೂ. ಬೆಲೆ ಇದ್ದರೆ, ಒಎನ್ಡಿಸಿಯಲ್ಲಿ ಆರ್ಡರ್ ಮಾಡಿ ನಿಗದಿತ ಡೆಲಿವರಿ ಶುಲ್ಕ ಸೇರಿ 320 ರೂ.ಗೆ ದೊರೆಯಲಿದೆ. ಪ್ಯಾಕೇಜಿಂಗ್ ಮತ್ತು ಇಂಟರ್ನೆಟ್ ಶುಲ್ಕಗಳಂತಹ ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ.
ಬೆಂಗಳೂರು, ಮೈಸೂರು, ಹೈದರಾಬಾದ್‌ನಲ್ಲಿ ಸೇವೆ ಲಭ್ಯ: ಒಎನ್ಡಿಸಿ ಪ್ಲಾಟ್‌ಫಾರ್ಮ್ ಸೇವೆಯು ಬೆಂಗಳೂರು, ಮೈಸೂರು, ಕೋಲ್ಕತ್ತಾ ಮತ್ತು ಕೊಚ್ಚಿ ನಗರಗಳಲ್ಲಿ ಈಗಾಗಲೇ ಲಭ್ಯವಿದೆ. 1.15 ಲಕ್ಷಕ್ಕೂ ಹೆಚ್ಚು ಡೆಲಿವರಿ ಬಾಯ್‌ಗಳೊಂದಿಗೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲೂ ಇದು ಆರಂಭವಾಗಿದೆ. ಇದರಲ್ಲಿ ತೆಲಂಗಾಣ ಗಿಗ್ ವರ್ಕರ್ಸ್ ಅಸೋಸಿಯೇಷನ್ನ ಡೆಲಿವರಿ ಬಾಯ್ಸ್ ತೊಡಗಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ತಿಳಿಸಿದೆ.
ಒಎನ್ಡಿಸಿ ಪ್ಲಾಟ್‌ಫಾರ್ಮ್‌ಗಾಗಿ ಯಾವುದೇ ನಿರ್ದಿಷ್ಟ ಅಪ್ಲಿಕೇಶನ್ ಇಲ್ಲ. ಯುಪಿಐ (UPI) ಪಾವತಿ ಅಪ್ಲಿಕೇಶನ್‌ಗಳ ಮೂಲಕ ನೇರವಾಗಿ ಆರ್ಡರ್‌ಗಳನ್ನು ಮಾಡಬಹುದು. ಪ್ರಸ್ತುತ ಪೇಟಿಎಂ (Paytm)ನಲ್ಲಿ ಇದರ ಸೇವೆ ಲಭ್ಯವಿದೆ. ಹೈದರಾಬಾದ್‌ನ 25 ಸಾವಿರ ಡೆಲಿವರಿ ಬಾಯ್ಸ್ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ 15 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳಿದ್ದು, ವಾರ್ಷಿಕ ಒಂದು ಕೋಟಿಗೂ ಹೆಚ್ಚು ಬಿರಿಯಾನಿಗಳು ಮಾರಾಟವಾಗುತ್ತಿವೆ. ಈ ಆನ್‌ಲೈನ್ ವೇದಿಕೆಯ ಮೂಲಕ ವಾರ್ಷಿಕವಾಗಿ 500 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇತ್ತೀಚಿನ ಒಎನ್ಡಿಸಿ ಪ್ಲಾಟ್‌ಫಾರ್ಮ್ ಹೆಚ್ಚು ಜನರನ್ನು ತಲುಪಿದರೆ, ಗ್ರಾಹಕರಿಗೆ ಸುಮಾರು 50 ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.
ಇದನ್ನೂ ಓದಿ: ಸ್ವಿಗ್ಗಿ, ಜೊಮ್ಯಾಟೋ ದರ; ONDC ಜೊತೆ ಒಪ್ಪಂದಕ್ಕೆ ಮುಂದಾದ ಬೆಂಗಳೂರು ಹೊಟೇಲ್ ಅಸೋಸಿಯೇಷನ್