ಲೂಧಿಯಾನ (ಪಂಜಾಬ್): ಉದ್ಯಮಿಯೋರ್ವರ ನಿವಾಸದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ತೆರಳಿದ್ದ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳ(CGST) ಮೇಲೆ ಹಲ್ಲೆ ನಡೆಸಲಾಗಿದೆ. ಪಂಜಾಬ್ನ ಲೂಧಿಯಾನದಲ್ಲಿ ಈ ಘಟನೆ ನಡೆದಿದ್ದು, ಕೆಲವೊಂದು ವಿಡಿಯೋ ಹೊರಬಿದ್ದಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಲೂಧಿಯಾನದಲ್ಲಿರುವ ಉದ್ಯಮಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ದಾಳಿ ನಡೆಸಿದ್ದು, ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸಿಜಿಎಸ್ಟಿ ತಂಡದ ಇನ್ಸ್ಪೆಕ್ಟರ್ ರೋಹಿತ್ ಮೀನಾ ನೀಡಿರುವ ಮಾಹಿತಿ ಪ್ರಕಾರ, ಉದ್ಯಮಿ ಯಶಪಾಲ್ ಮೆಹ್ತಾ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ, ಮೆಹ್ತಾ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದು, ಕಲ್ಲು ತೂರಾಟ ನಡೆಸಿದ್ದಾರೆಂದು ಆರೋಪಿಸಿದ್ದಾರೆ. ಯಶಪಾಲ್ ಮೆಹ್ತಾ ಅವರ ಸೊಸೆ, ಮಗ, ಮಗಳು ಹಾಗೂ ಇತರೆ ಸಂಬಂಧಿಗಳು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಅಧಿಕಾರಿಗಳನ್ನು ನಿಂದಿಸಿದ್ದಾರೆ. ನಿವಾಸದಿಂದ ಹೊರಬರಲು ಮುಂದಾದ ವೇಳೆ ದಾರಿ ತಡೆದಿರುವ ಘಟನೆ ಸಹ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ವಿಷರಹಿತ ಹಾವು, ಆಮೆ, ಕೋತಿಗಳ ಅಕ್ರಮ ಸಾಗಣೆ.. ಚೆನ್ನೈ ಏರ್ಪೋರ್ಟ್ನಲ್ಲಿ ಆರೋಪಿ ಬಂಧನ
ಸಿಜಿಎಸ್ಟಿ ತಂಡದ ಕಾರ್ಯಕ್ಕೆ ಅಡ್ಡಿಪಡಿಸಿರುವ ಕಾರಣ ಕುಟುಂಬದ ಸದಸ್ಯರ ವಿರುದ್ಧ ಅವೆನ್ಯೂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಕೆಲವೊಂದು ವಿಡಿಯೋಗಳು ಇದೀಗ ಹೊರಬಿದ್ದಿವೆ.
ಪ್ರಕರಣದಲ್ಲಿ ಯಶಪಾಲ್ ಮೆಹ್ತಾ, ಅವರ ಸೊಸೆ ಅಲ್ಕಾ ಮೆಹ್ತಾ, ಮಗ ಸುಗಂಧನ್ ಮೆಹ್ತಾ, ಮಗಳು ಹಾಗೂ ಇತರೆ ಕೆಲ ಸದಸ್ಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 332 ಮತ್ತು 427 ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ಶೀಘ್ರದಲ್ಲೇ ಬಂಧಿಸಲಿದ್ದಾರೆಂದು ತಿಳಿದುಬಂದಿದೆ.