ನವದೆಹಲಿ: ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಬೆಳಗ್ಗೆ 8 ಗಂಟೆಯವರೆಗಿನ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 213ಕ್ಕೆ ಏರಿಕೆಯಾಗಿದೆ.
15 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶದಲ್ಲಿ ವೈರಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಪೈಕಿ 90 ಮಂದಿ ಚೇತರಿಕೆ ಕಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರವನ್ನು ಹಿಂದಿಕ್ಕಿರುವ ರಾಷ್ಟ್ರ ರಾಜಧಾನಿ ದೆಹಲಿ ಒಮಿಕ್ರಾನ್ ಕೇಸ್‌ಗಳಲ್ಲಿ ಅಗ್ರ ಸ್ಥಾನದಲ್ಲಿದೆ. ದೆಹಲಿಯಲ್ಲಿ ಈಗಾಗಲೇ 57 ಕೇಸ್‌ಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 54 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ತೆಲಂಗಾಣ (24), ಕರ್ನಾಟಕ (19), ರಾಜಸ್ಥಾನ (18), ಕೇರಳ (15) ಹಾಗೂ ಗುಜರಾತ್‌ನಲ್ಲಿ 14 ಪ್ರಕರಣಗಳು ದಾಖಲಾಗಿವೆ.
6,317 ಕೋವಿಡ್ ಕೇಸ್; 575 ದಿನಗಳಲ್ಲೇ ಕಡಿಮೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,317 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದು 575 ದಿನಗಳಲ್ಲೇ ಅತಿ ಕಡಿಮೆ ಪ್ರಕರಣಗಳಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ 47 ಲಕ್ಷ 58 ಸಾವಿರದ 481ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 78,190ಕ್ಕೆ ತಲುಪಿದೆ. ಒಂದೇ ದಿನ 318 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,78,325ಕ್ಕೆ ಏರಿಕೆಯಾಗಿದೆ.
ನಾಳೆ ಪ್ರಧಾನಿ ಮೋದಿ ಸಭೆ
ಒಮಿಕ್ರಾನ್ ಪ್ರಕರಣಗಳು ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಳೆ ಉನ್ನತ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಕೋವಿಡ್ ಕುರಿತು ಪ್ರಮುಖ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೈದರಾಬಾದ್ಗೆ ಮರುನಾಮಕರಣ ಅಜೆಂಡಾ: ಟ್ವೀಟ್ನಲ್ಲಿ ಭಾಗ್ಯನಗರ ಎಂದು ಉಲ್ಲೇಖಿಸಿದ ಆರ್ಎಸ್ಎಸ್