ಥಾಣೆ(ಮಹಾರಾಷ್ಟ್ರ): ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಕೋವಿಡ್ನ ರೂಪಾಂತರ ಒಮಿಕ್ರಾನ್ ಸೋಂಕು ಈಗಾಗಲೇ ಭಾರತದಲ್ಲೂ ಹಬ್ಬಿದೆ. ಕಳೆದ ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ್ದ 33 ವರ್ಷದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಕೇಪ್ಟೌನ್ನಿಂದ ವಾಪಸ್ ಬಂದಿದ್ದ ಮಹಾರಾಷ್ಟ್ರದ ವ್ಯಕ್ತಿಯಲ್ಲಿ ನವೆಂಬರ್ 22ರಂದು ಒಮಿಕ್ರಾನ್ ಕಾಣಿಸಿಕೊಂಡಿತ್ತು. ತಕ್ಷಣವೇ ಥಾಣೆಯ ಕೆಡಿಎಂಸಿ ಕೋವಿಡ್ ಸೆಂಟರ್ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ ಹುಟ್ಟುಹಬ್ಬದಂದೇ ಡಿಸ್ಚಾರ್ಜ್ ಆಗಿದ್ದಾರೆ.
ಕೆಲ ದಿನಗಳ ಕಾಲ ಚಿಕಿತ್ಸೆ ನೀಡಲಾಗಿದ್ದು, ಇದೀಗ ಯಾವುದೇ ರೀತಿಯ ಗುಣಲಕ್ಷಣ ಕಾಣಸಿಕ್ಕಿಲ್ಲ. ಜೊತೆಗೆ ಆರ್ಟಿಪಿಸಿಅರ್ ಟೆಸ್ಟ್ನಲ್ಲೂ ನೆಗೆಟಿವ್ ಬಂದಿದ್ದು, ಅವರನ್ನ ಮನೆಗೆ ಕಳುಹಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮುನ್ಸಿಪಾಲ್ ಕಮಿಷನರ್ ಡಾ. ವಿಜಯ್ ಸೂರ್ಯವಂಶಿ ಮಾಹಿತಿ ನೀಡಿದ್ದು, ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಮುಂದಿನ ಏಳು ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಇಬ್ಬರಿಗೆ ಒಮಿಕ್ರಾನ್ ಕಾಣಿಸಿಕೊಳ್ಳುವ ಮೂಲಕ ಭಾರತಕ್ಕೆ ಹೊಸ ಸೋಂಕು ಲಗ್ಗೆ ಹಾಕಿದ್ದು, ಈಗಾಗಲೇ 23ಕ್ಕೂ ಅಧಿಕ ಸೋಂಕುಗಳು ದೇಶದಲ್ಲಿವೆ. ಆದರೆ, ಯಾವುದೇ ರೀತಿಯ ಸಾವು ಸಂಭವಿಸಿಲ್ಲ.
ಇದನ್ನೂ ಓದಿರಿ: ಕೋವಿಡ್ ಸೋಂಕಿನಂತೆ ಸುಲಭವಾಗಿ ಪತ್ತೆಯಾಗಲ್ಲ ಈ ಒಮಿಕ್ರಾನ್..
ಮಹಾರಾಷ್ಟ್ರದಲ್ಲಿ ಈಗಲೂ 8ಕ್ಕೂ ಅಧಿಕ ಒಮಿಕ್ರಾನ್ ಸೋಂಕಿತ ಪ್ರಕರಣಗಳಿದ್ದು, ಎಲ್ಲರಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.