ನವದೆಹಲಿ : ದೇಶದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ನಿನ್ನೆ ಒಂದೇ ದಿನ 84 ಪ್ರಕರಣವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ.
ನಿನ್ನೆ ಕರ್ನಾಟಕದಲ್ಲಿ 12 ಮಂದಿಗೆ ಒಮಿಕ್ರಾನ್ ದೃಢಪಟ್ಟರೆ, ತಮಿಳುನಾಡಿನಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ನೆರೆಯ ಮಹಾರಾಷ್ಟ್ರದಲ್ಲಿ 33, ಗುಜರಾತ್ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲಾ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಹೊಸ ರೂಪಾಂತರಿ ಪ್ರಕರಣ ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯ ಹಾಗೂ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆ ಬಗ್ಗೆ ಪ್ರಧಾನಿ ಮೋದಿ ನಿನ್ನೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಔಷಧಿ ಲಭ್ಯತೆ, ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು, ಪಿಎಸ್‌ಎ ಪ್ಲಾಂಟ್‌ಗಳು, ಐಸಿಯು ಹಾಸಿಗೆಗಳು, ಮಾನವ ಸಂಪನ್ಮೂಲಗಳು ಹಾಗೂ ವ್ಯಾಕ್ಸಿನೇಷನ್‌ನ ಸ್ಥಿತಿ ಸೇರಿದಂತೆ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ಎಲ್ಲಾ ಹಂತಗಳಲ್ಲಿ ಉನ್ನತ ಮಟ್ಟದ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಪ್ರಧಾನಿ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಿಯಂತ್ರಣ ಮತ್ತು ನಿರ್ವಹಣೆಯ ಸಾರ್ವಜನಿಕ ಆರೋಗ್ಯ ಕ್ರಮಗಳ ಪ್ರಯತ್ನಗಳನ್ನು ಬೆಂಬಲಿಸಲು ರಾಜ್ಯಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆಯೂ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಕೋವಿಡ್ ರೂಪಾಂತರಿಯ ಆತಂಕ ; ಅಮೆರಿಕದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್