ಮೀರತ್(ಉತ್ತರ ಪ್ರದೇಶ): ದಕ್ಷಿಣ ಆಫ್ರಿಕಾದ ರೂಪಾಂತರ ಕೋವಿಡ್ ವೈರಸ್ ಒಮಿಕ್ರಾನ್ ಇದೀಗ ಭಾರತಕ್ಕೂ ಲಗ್ಗೆ ಹಾಕಿದ್ದು, ಬೆಂಗಳೂರಿನ ಎರಡು ಪ್ರಕರಣ ಸೇರಿದಂತೆ ದೇಶದಲ್ಲಿ 4 ಕೇಸ್ ದಾಖಲಾಗಿವೆ. ಇದರ ಬೆನ್ನಲ್ಲೇ ವಿದೇಶದಿಂದ ಉತ್ತರ ಪ್ರದೇಶಕ್ಕೆ ಆಗಮಿಸಿದ್ದ 10 ಮಂದಿ ನಾಪತ್ತೆಯಾಗಿದ್ದಾರೆಂದು ಮೀರತ್ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಳೆದ 15 ದಿನದಲ್ಲಿ ಉತ್ತರ ಪ್ರದೇಶಕ್ಕೆ ವಿದೇಶದಿಂದ ಒಟ್ಟು 250 ಜನರು ಆಗಮಿಸಿದ್ದು, ಇದರಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆಂದು ಮೀರತ್ ಜಿಲ್ಲಾಡಳಿತ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಮೀರತ್ ಸಿಎಂಒ ಅಖಿಲೇಶ್ ಮೋಹನ್, ಒಮಿಕ್ರಾನ್ ತಡೆಗಟ್ಟಲು ಮೀರತ್ನಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕಳೆದ 15 ದಿನಗಳಲ್ಲಿ 250 ವಿದೇಶಿಗರು ವಾಪಸ್ ಆಗಿದ್ದಾರೆ. ಆದರೆ ಇದರಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಕರ್ನಾಟಕ, ಗುಜರಾತ್ ಆಯ್ತು, ಇದೀಗ ಮಹಾರಾಷ್ಟ್ರದಲ್ಲೂ ಒಮಿಕ್ರಾನ್ ಪತ್ತೆ
ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಜರ್ಮನಿ, ಜಪಾನ್, ಕುವೈತ್, ಮಲೇಷಿಯಾ, ಮಾಲ್ಡೀವ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸೇರಿದಂತೆ ಅನೇಕ ವಿದೇಶಗಳಿಂದ ಜನರು ಆಗಮಿಸಿದ್ದು, ಇವರನ್ನೆಲ್ಲ ಐಸೋಲೇಷನ್ನಲ್ಲಿಡಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಈಗಾಗಲೇ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿಗೆ ಆಗಮಿಸಿರುವ ಅನೇಕ ವಿದೇಶಿಗರ ಪೈಕಿ 10 ಜನರು ನಾಪತ್ತೆಯಾಗಿದ್ದಾರೆಂದು ಆರೋಗ್ಯ ಸಚಿವ ಡಾ. ಸುಧಾಕರ್ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ.