ಅನಂತಪುರ( ಆಂಧ್ರಪ್ರದೇಶ): ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮಗಳ ಪ್ರಕರಣದಲ್ಲಿ ಒಎಂಸಿ ಎಂಡಿ ಶ್ರೀನಿವಾಸರೆಡ್ಡಿ ಅವರಿಗೆ ಅನಂತಪುರ ಜಿಲ್ಲಾ ರಾಯದುರ್ಗದ ಜೂನಿಯರ್ ಸಿವಿಲ್ ಜಡ್ಜ್ ಕೋರ್ಟ್ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ: 2008ರಲ್ಲಿ ಒಬಳಾಪುರಂ ಪ್ರದೇಶದಲ್ಲಿ ಒಎಂಸಿ ನಿರ್ವಾಹಕರು ಅನುಮತಿ ಮೀರಿ ಕಬ್ಬಿಣದ ಅದಿರು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಜಿಲ್ಲಾ ಅರಣ್ಯಾಧಿಕಾರಿ ಕಲ್ಲೋಳ್ ಬಿಸ್ವಾಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ, ಒಎಂಸಿ ಎಂಡಿ ಶ್ರೀನಿವಾಸರೆಡ್ಡಿ ವಿಚಾರಣೆಗೆ ತೆರಳದಂತೆ ಅಡ್ಡಿಪಡಿಸಿ, ಕರ್ತವ್ಯಕ್ಕೆ ತಡೆಯೊಡ್ಡಿದ್ದರು ಎಂದು ಆರೋಪಿಸಿ ಕಲ್ಲೋಲ್ ಬಿಸ್ವಾಸ್ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಸುದೀರ್ಘ ತನಿಖೆ ನಡೆದು ಕೋರ್ಟ್ಗೆ ಕೇಸ್ ಫೈಲ್ ಮಾಡಲಾಗಿತ್ತು. ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಶ್ರೀನಿವಾಸರೆಡ್ಡಿ ದೋಷಿ ಎಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಒಎಂಸಿ ಎಂಡಿಗೆ ನಾಲ್ಕು ವರ್ಷ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ ಮೂರು ಕಲಂಗಳಡಿ 8,500 ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಈ ನಡುವೆ ಅಪರಾಧಿ ಎಂದು ಕೆಳ ನ್ಯಾಯಾಲಯದಲ್ಲಿ ಸಾಬೀತಾಗಿದ್ದರಿಂದ ಶಿಕ್ಷೆಗೆ ಗುರಿಯಾಗಿದ್ದಾರೆ. ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಶ್ರೀನಿವಾಸರೆಡ್ಡಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ.
ಇದನ್ನು ಓದಿ; ಬಾಗಲಕೋಟೆಯಲ್ಲಿ ಗುಂಡು ಹಾರಿಸಿಕೊಂಡು ನಿವೃತ್ತ ಜಡ್ಜ್ ಆತ್ಮಹತ್ಯೆ