ನವದೆಹಲಿ: ಸಂಸತ್ ಅಧಿವೇಶನದಲ್ಲಿ ವಿವಿಧ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಸೃಷ್ಟಿಸಿದ ಗದ್ದಲದಿಂದಾಗಿ ಅಧಿಕೃತ ದೂರು ದಾಖಲಾಗಿದೆ. ಈ ಕುರಿತು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ಅಧಿಕೃತ ಮೂಲಗಳ ತಿಳಿದು ಬಂದಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿದ ಸಂಸದರ ವಿರುದ್ಧ ಅಧಿಕೃತ ದೂರು ದಾಖಲಾಗಿದೆ. ರಾಜ್ಯಸಭಾ ಅಧ್ಯಕ್ಷರು ಮತ್ತು ಕೇಂದ್ರ ಸಚಿವರ ಸಭೆಯಲ್ಲಿ ಒಂದು ಸಮಿತಿ ರಚಿಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಭಾರತೀಯ ಜನತಾ ಪಕ್ಷದ ಹಿರಿಯ ಸಚಿವರು ಇಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರನ್ನು ಈ ಸಂಬಂಧ ದೆಹಲಿಯಲ್ಲಿ ಭೇಟಿಯಾಗಿ ವಿರೋಧ ಪಕ್ಷದ ಸಂಸದರು ಸದನದಲ್ಲಿ ಗದ್ದಲ ಸೃಷ್ಟಿಸಿದರ ಬಗ್ಗೆ ಮನವರಿಕೆ ಮಾಡಿದ್ದಾರೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ, ಅರ್ಜುನ್ ರಾಮ್ ಮೇಘ್ವಾಲ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಭೂಪೇಂದ್ರ ಯಾದವ್ ಸೇರಿದಂತೆ ಪ್ರಮುಖರು ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ.
ಹೆಚ್ಚಿನ ಓದಿಗೆ: Explainer: 2021ರ ಮುಂಗಾರು ಅಧಿವೇಶನದ ಕಾರ್ಯ - ಕಲಾಪ ಹೇಗಿತ್ತು?
ಮೇಲ್ಮನೆಯಲ್ಲಿನ ಪ್ರತಿಪಕ್ಷದ ಸಂಸದರು ಮತ್ತು ಮಾರ್ಷಲ್‌ಗಳ ನಡುವಿನ ಗಲಾಟೆಯ ಸಿಸಿಟಿವಿ ದೃಶ್ಯಾವಳಿಗಳು ಗುರುವಾರ ಹೊರ ಬಿದ್ದಿವೆ. ವಿಡಿಯೋ ತುಣುಕಿನಲ್ಲಿ, ಮಾರ್ಷಲ್‌ಗಳು ವಿರೋಧ ಪಕ್ಷದ ಸಂಸದರು ಸಭಾಪತಿಯ ವೇದಿಕೆಯ ಕಡೆಗೆ ಹೋಗುವುದನ್ನು ತಡೆಯುವುದನ್ನು ನೋಡಬಹುದು.
ಸಂಸತ್ತಿನ ಉಭಯ ಸದನಗಳನ್ನು ಬುಧವಾರದಂದು ಮುಂದೂಡಲಾಯಿತು. ಜುಲೈ 19 ರಂದು ಆರಂಭವಾದ ಅಧಿವೇಶನದುದ್ದಕ್ಕೂ, ಪ್ರತಿಪಕ್ಷ ಸದಸ್ಯರು ಪೆಗಾಸಸ್, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಮೇಲೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ರೀತಿಯಾಗಿ ಒತ್ತಾಯಿಸಿದರು.