ಡೆಹ್ರಾಡೂನ್ (ಉತ್ತರಾಖಂಡ): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಉತ್ತರಾಖಂಡ ಭೇಟಿಯ ವೇಳೆ ಅವರ ಭದ್ರತಾ ಬೆಂಗಾವಲು ಪಡೆಯಲ್ಲಿ ಇರಬೇಕಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ 7 ಸರ್ಕಾರಿ ಅಧಿಕಾರಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಅಧಿಕಾರಿಗಳನ್ನು ಅವರವರ ಕರ್ತವ್ಯದ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ರಾಷ್ಟ್ರಪತಿ ಕೋವಿಂದ್ ಅವರು ಎರಡು ದಿನಗಳ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್‌ಎಸ್‌ಪಿ ಪೌರಿ.ಪಿ ರೇಣುಕಾ ದೇವಿ, ಪಾಸಿಟಿವ್ ಬಂದಿರುವ ಅಧಿಕಾರಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳ ಇತ್ತೀಚಿನ ಸಂಪರ್ಕಗಳ ಬಗ್ಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಸೋಂಕಿತ ಅಧಿಕಾರಿಗಳೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ತಪಾಸಣೆಗೆ ಒಳಗಾಗುವಂತೆ ತಿಳಿಸಲಾಗಿದೆ ಎಂದರು.
ಮಾಹಿತಿಯ ಪ್ರಕಾರ, ಕರ್ತವ್ಯಕ್ಕೆ ನಿಯೋಜಿಸುವ ಮೊದಲು ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್ ಬಂದ ಹಿನ್ನೆಲೆ ಅಧಿಕಾರಿಗಳಿಗೆ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಲಾಗಿದೆ. ಶನಿವಾರ, ವಿಐಪಿ ಕರ್ತವ್ಯಕ್ಕೂ ಮುನ್ನ, ಚಮೋಲಿ, ಉತ್ತರಕಾಶಿ, ರುದ್ರಪ್ರಯಾಗ, ಡೆಹ್ರಾಡೂನ್, ತೆಹ್ರಿ ಮತ್ತು ಪೌರಿಯ 400 ಕ್ಕೂ ಹೆಚ್ಚು ಪೊಲೀಸರು ಮತ್ತು ಇಲಾಖಾ ನೌಕರರನ್ನು ಪರಮಾರ್ಥ ನಿಕೇತನ ಆಶ್ರಮದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಇದನ್ನೂ ಓದಿ: 3 ಕೃಷಿ ಕಾನೂನುಗಳ ರದ್ದು: ಟೀಕೆಗೆ ಗುರಿಯಾದ 'ಉದ್ದೇಶ ಮತ್ತು ಕಾರಣಗಳ ಹೇಳಿಕೆ'