ಭುವನೇಶ್ವರ(ಒಡಿಶಾ) : ಜವಾದ್ ಚಂಡಮಾರುತ ಇಂದು ಮಧ್ಯಾಹ್ನದ ವೇಳೆಗೆ ಒಡಿಶಾ ಕರಾವಳಿಯ ಪುರಿ ಸಮೀಪ ತಲುಪುವ ಸಾಧ್ಯತೆ ಇದೆ. ಒಡಿಶಾದ ರಾಜಧಾನಿ ಭುವನೇಶ್ವರ ಸೇರಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಇದು ಉತ್ತರ-ಈಶಾನ್ಯ ಭಾಗ, ಒಡಿಶಾ ಕರಾವಳಿಯುದ್ದಕ್ಕೂ ಹಾಗೂ ಪಶ್ಚಿಮ ಬಂಗಾಳ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. 12 ಗಂಟೆಗಳ ಬಳಿಕ ದುರ್ಬಲಗೊಳ್ಳುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ತಿಳಿಸಿದೆ.
ಅವಳಿ ನಗರದಲ್ಲಿ ಭಾರೀ ಮಳೆಯೊಂದಿಗೆ (7-11 ಸೆಂ.ಮೀ.) ಮೋಡ ಕವಿದ ವಾತಾವರಣವಿದ್ದರೆ, ಕಟಕ್ ಮತ್ತು ಭುವನೇಶ್ವರದ ಕೆಲವು ಭಾಗಗಳಲ್ಲಿ 30-40 ಕಿ.ಮೀ ಮೇಲ್ಮೈ ಗಾಳಿ ಬೀಸುತ್ತಿದೆ.
ಗೋಪಾಲಪುರದಲ್ಲಿ ಅತಿ ಹೆಚ್ಚು 60 ಮಿ.ಮೀ ಮಳೆ ದಾಖಲಾಗಿದೆ. ಪಾರಾದೀಪ್ 46 ಮಿ.ಮೀ, ಚಾಂದ್ಬಾಲಿ 28 ಮಿ.ಮೀ , ಬಾಲಸೋರ್ 24 ಮಿ.ಮೀ, ಭುವನೇಶ್ವರ್ 24.3 ಮಿಮೀ ಮತ್ತು ಪುರಿ 21 ಮಿ.ಮೀ. ಮಳೆಯಾಗಿದೆ.
ಈಗಾಗಲೇ ಒಡಿಶಾದಲ್ಲಿ ಮಳೆಯಾಗುತ್ತಿದೆ. ಪ್ರವಾಹ, ಭೂಕುಸಿತದಂತಹ ಹಾನಿಗಳೂ ಉಂಟಾಗಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಒಡಿಶಾದ ಗಜಪತಿ, ಗಂಜಮ್, ಪುರಿ ಮತ್ತು ಜಗತ್‌ಸಿಂರ್ಘ್ಪು, ಕಟಖ್ ಮತ್ತು ಭುವನೇಶ್ವರಗಳಲ್ಲಿ ಅತಿಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಜವಾದ್ ಚಂಡಮಾರುತದ ಎಫೆಕ್ಟ್: 75ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು