ಭುವನೇಶ್ವರ್(ಒಡಿಶಾ) : ಮುಖ್ಯಮಂತ್ರಿಯಾಗಿ ಸತತ ಐದನೇ ಅವಧಿಯನ್ನು ಪೂರೈಸಲು ಮುಂದಾಗಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸರ್ಕಾರ 3 ವರ್ಷ ಪೂರೈಸಿದ ಹಿನ್ನೆಲೆ ಸಚಿವ ಸಂಪುಟವನ್ನು ಪುನಾರಚನೆ ಮಾಡಿದ್ದಾರೆ. ಅನುಭವಿ ಮತ್ತು ಯುವಕರಿಗೆ ಮಣೆ ಹಾಕಿರುವ ಪಟ್ನಾಯಕ್, 5 ಮಹಿಳೆಯರು ಸೇರಿ 21 ಜನರಿಗೆ ಅವಕಾಶ ನೀಡಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
2024ರ ವಿಧಾನಸಭಾ ಚುನಾವಣೆಗಾಗಿ ಸಿದ್ಧತೆ ನಡೆಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಭಾನುವಾರ ತಮ್ಮ ಸಚಿವ ಸಂಪುಟವನ್ನು ಪುನಾರಚಿಸಿದ್ದಾರೆ. 5 ಮಹಿಳಾ ಸಚಿವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. 20 ಸಚಿವರು ಶನಿವಾರ ರಾಜೀನಾಮೆ ನೀಡಿದ ನಂತರ ಹೊಸ ಮಂತ್ರಿ ಮಂಡಲವನ್ನು ಇಂದು ರಚಿಸಲಾಗಿದೆ.
ಭುವನೇಶ್ವರದಲ್ಲಿರುವ ಲೋಕಸೇವಾ ಭವನದ ನೂತನ ಕೇಂದ್ರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. 13 ಕ್ಯಾಬಿನೆಟ್ ಮತ್ತು 8 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಸೇರಿದಂತೆ ಒಟ್ಟು 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮೂವರು ಮಹಿಳೆಯರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲಾಗಿದೆ. ಕಳೆದ ಸಚಿವ ಸಂಪುಟದಲ್ಲಿ ಕೇವಲ ಇಬ್ಬರು ಮಹಿಳೆಯರು ಮಾತ್ರ ಸಚಿವರಾಗಿದ್ದರು.
ಹೊಸ ಮಂತ್ರಿಗಳು : ಪ್ರಮೀಳಾ ಮಲ್ಲಿಕ್, ಉಷಾದೇವಿ ಮತ್ತು ತುಕುನಿ ಸಾಹು ಅವರು ಹೊಸ ಮಹಿಳಾ ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದರೆ, ಜಗನ್ನಾಥ್ ಸರಕಾ, ನಿರಂಜನ್ ಪೂಜಾರಿ, ರಣೇಂದ್ರ ಪ್ರತಾಪ್ ಸ್ವೈನ್, ಪ್ರಫುಲ್ಲ ಕುಮಾರ್ ಮಲ್ಲಿಕ್, ಪ್ರತಾಪ್ ಕೇಶರಿ ದೇಬ್ ಮತ್ತು ಅತಾನು ಸಭ್ಯಸಾಚಿ ನಾಯಕ್ ಅವರು ಕ್ಯಾಬಿನೆಟ್ ದರ್ಜೆ ಸ್ಥಾನವನ್ನು ಪಡೆದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇದಲ್ಲದೇ, ಪ್ರದೀಪ್ ಕುಮಾರ್ ಅಮತ್, ನಬಾ ಕಿಸೋರ್ ದಾಸ್, ಅಶೋಕ್ ಚಂದ್ರ ಪಾಂಡಾ ಮತ್ತು ರಾಜೇಂದ್ರ ಧೋಲಾಕಿಯಾ, ಸಮೀರ್ ರಂಜನ್ ದಾಶ್, ಅಶ್ವಿನಿ ಕುಮಾರ್ ಪಾತ್ರ, ಪ್ರೀತಿರಂಜನ್ ಘರಾಯ್, ಶ್ರೀಕಾಂತ ಸಾಹು, ತುಷಾರಕಾಂತಿ ಬೆಹೆರಾ, ರೋಹಿತ್ ಪೂಜಾರಿ, ರೀಟಾ ಸಾಹು ಮತ್ತು ಬಸಂತಿ ಹೆಂಬ್ರಾಮ್ ಅವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ರಾಜ್ಯಪಾಲ ಗಣೇಶಿ ಲಾಲ್ ಅವರಿಂದ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.
ಓದಿ: ಪರಿಸರ ಸಂರಕ್ಷಣೆಗಾಗಿ ಭಾರತದಿಂದ ವಿವಿಧ ಪ್ರಯತ್ನ: ಪ್ರಧಾನಿ ಮೋದಿ