ನವದೆಹಲಿ: ಒಬಿಸಿ ಮೀಸಲು ಹೆಚ್ಚಳಕ್ಕೆ ಸಂಬಂಧಿಸಿದ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕ ತಕ್ಷಣ ಕಾನೂನಾಗಿ ಜಾರಿಗೆ ಬರಲಿದೆ. ಹೀಗೆ ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಪಡೆಯಲು ಈ ಕಾನೂನು ಅನುವು ಮಾಡಿಕೊಡಲಿದೆ.
ಇಂದು ಈ ಸಂಬಂಧ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಈ ವಿಧೇಯಕಕ್ಕೆ ಎಲ್ಲ ಪ್ರತಿಪಕ್ಷಗಳೂ ಬೆಂಬಲ ಕೊಟ್ಟಿವೆ. ವಿಧೇಯಕದ ಪರ 385 ಮತಗಳು ಬಿದ್ದಿವೆ. ವಿಧೇಯಕದ ವಿರುದ್ಧ ಯಾವುದೇ ಮತಗಳು ಚಲಾವಣೆ ಆಗಿಲ್ಲ.
ಈ ಬಿಲ್ ಪಾಸ್ ಆಗಿರುವುದರಿಂದ ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ತಮ್ಮನ್ನು ಒಬಿಸಿ ಲಿಸ್ಟ್ಗೆ ಸೇರಿಸಬೇಕೆಂದು ಎದ್ದಿರುವ ಕೂಗಿಗೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇದೆ. ಈಗಾಗಲೇ ಈ ಸಂಬಂಧ ಹಲವು ರಾಜ್ಯಗಳು ಸರ್ವೆಗೂ ಆದೇಶ ಮಾಡಿವೆ.
ಈ ಹಿಂದೆ ರಾಜಸ್ಥಾನದಲ್ಲಿ ಗುಜ್ಜರು, ಹರಿಯಾಣ, ಪಂಜಾಬ್ನಲ್ಲಿ ಜಾಟರು ಭಾರಿ ಪ್ರತಿಭಟನೆ ಮಾಡಿದ್ದರು. ಜಾಟರ ಹೋರಾಟವಂತೂ ಹರಿಯಾಣವನ್ನು ರಣರಂಗವಾಗಿಸಿತ್ತು. ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಮರಾಠರು ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ನಡೆಸಿದ್ದರು.
ಈ ಪ್ರಕರಣದಲ್ಲಿ ಸುಪ್ರೀಂ ಏನು ಹೇಳಿತ್ತು?
ಈ ಪ್ರಕರಣ ಕೋರ್ಟ್ ಮೆಟ್ಟಿಲು ಏರಿ, ಹೈಕೋರ್ಟ್ ಸುಪ್ರೀಂಕೋರ್ಟ್ನಲ್ಲಿ ವಾದ - ಪ್ರತಿವಾದ ನಡೆದು, ಸಂವಿಧಾನದ 342ಎ ವಿಧಿಯನ್ನು ಸುಪ್ರೀಂ ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿತ್ತು. ಒಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರ ಕೇವಲ ರಾಷ್ಟ್ರಪತಿಗಳಿಗೆ ಮಾತ್ರ ಇದೆ. ಹಾಗಾಗಿ ರಾಜ್ಯ ಸರ್ಕಾರದ ಆದೇಶವನ್ನು ವಜಾ ಮಾಡುವಂತೆ ತೀರ್ಪು ನೀಡಿತ್ತು.
ಇದಕ್ಕಿಂತ ಮುಂಚಿನ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಒಟ್ಟಾರೆ ಮೀಸಲು ಶೇ 50ಕ್ಕಿಂತ ಹೆಚ್ಚಾಗಬಾರದು ಎಂದು ಮಹತ್ವದ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳಿಗೆ ಮೀಸಲು ಹೋರಾಟವನ್ನು ಶಮನಗೊಳಿಸುವುದು ದೊಡ್ಡ ಸಮಸ್ಯೆ ಆಗಿತ್ತು. ಈಗ ಸಂವಿಧಾನದ 127ನೇ ತಿದ್ದುಪಡಿಗೆ ಲೋಕಸಭೆ ಅಂಗೀಕಾರ ನೀಡಿದೆ.
ಸರ್ಕಾರದ ಮಸೂದೆಗೆ ಪ್ರತಿಪಕ್ಷಗಳು ಬೆಂಬಲ ನೀಡಿರುವುದರಿಂದ ನಾಳೆ ರಾಜ್ಯಸಭೆಯಲ್ಲೂ ವಿಧೇಯಕಕ್ಕೆ ಅಂಗೀಕಾರ ಸಿಗುವುದು ನಿಶ್ಚಿತವಾಗಿದೆ. ಬಳಿಕ ಇದು ರಾಷ್ಟ್ರಪತಿಗಳಿಂದ ಅಂಗೀಕಾರಗೊಂಡರೆ, ಕಾನೂನಾಗಿ ಜಾರಿಗೆ ಬರಲಿದೆ.
ರಾಜ್ಯದಲ್ಲಿನ ಹೋರಾಟಗಳಿಗೆ ಮುಕ್ತಿ: ಇಂದು ಲೋಕಸಭೆಯಲ್ಲಿ ಮೀಸಲು ಹೆಚ್ಚಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆಯುತ್ತಿದ್ದಂತೆ, ಪಂಚಮಸಾಲಿ ಮಠಾಧೀಶರು ಹಾಗೂ ನಾಯಕರು ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಮನವಿಯನ್ನು ಮತ್ತೊಮ್ಮೆ ಸರ್ಕಾರದ ಮುಂದಿಡಲು ಸಜ್ಜಾಗಿದ್ದಾರೆ.