ಕೊಟ್ಟಾಯಂ,(ಕೇರಳ) : ಈ ಬಾರಿಯ ವಿಧಾನಸಭಾ ಚುನಾವಣೆ ಬಳಿಕ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟ ಅಧಿಕಾರಕ್ಕೆ ಬಂದರೆ 'ನ್ಯಾಯ್' ಯೋಜನೆಯನ್ನು ಮೊದಲ ಬಾರಿಗೆ ಇಲ್ಲಿಯೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪ್ರತಿನಿಧಿಸುತ್ತಿರುವ ಪುಥುಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಸ್ವಾರ್ಥದ ಕಾರಣವಿದೆ ಎಂದು ಮಾರ್ಮಿಕವಾಗಿ ನುಡಿದರು.
ನ್ಯಾಯ್ ಯೋಜನೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ 72 ಸಾವಿರ ರೂಪಾಯಿ ಹಣ ನೇರವಾಗಿ ಜಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಜಾರಿಗೆ ಬರುತ್ತದೆ. ಹೊಸ ಯೋಜನೆಯೊಂದನ್ನು ಕೇರಳದಲ್ಲಿ ಪರಿಚಯಿಸಲಿದ್ದೇವೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗಬ್ಬರ್ಗೆ ನಿರಾಸೆ: ಕೇವಲ 2 ರನ್ಗಳಿಂದ ಧವನ್ ಶತಕ ವಂಚಿತ
ಲೋಕಸಭಾ ಚುನಾವಣೆಯಲ್ಲಿಯೂ ನ್ಯಾಯ್ ಯೋಜನೆ ಬಗ್ಗೆ ರಾಹುಲ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರೂ ಕೂಡ, ಕಾಂಗ್ರೆಸ್ ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರಗಳನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಅದೇ ಯೋಜನೆಯನ್ನು ಕೇರಳದಲ್ಲಿ ಪುನರುಚ್ಚರಿಸಿದ್ದಾರೆ.
ಈ ಯೋಜನೆ ಕೇರಳದಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿರುವ ಎಲ್ಲಾ ರಾಜ್ಯಗಳಿಗೆ ಯೋಜನೆ ವಿಸ್ತರಣೆ ಮಾಡುವುದಾಗಿ ರಾಹುಲ್ ಹೇಳಿದ್ದು, ಈ ಮೂಲಕ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಮತ ಪ್ರಚಾರ ಮಾಡುತ್ತಿದ್ದಾರೆ.