ಕರೀಂನಗರ(ತೆಲಂಗಾಣ): ಸಂಗೀತಕ್ಕೆ ಕಲ್ಲು ಕರಗುತ್ತದೆ ಎಂಬ ಮಾತಿದೆ. ಸಂಗೀತವನ್ನು ಆಲಿಸಿದ ಯಾವೊಬ್ಬ ವ್ಯಕ್ತಿಯೇ ಆಗಲಿ, ಅವರು ಅಂಗಾಂಗಳನ್ನು ಚಲಿಸಲೇಬೇಕು. ಇದೇ ರೀತಿ ತೆಲಂಗಾಣದ ಕರೀಂನಗರದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋಮಾದಲ್ಲಿದ್ದ ರೋಗಿಯೊಬ್ಬ ಸಂಗೀತ ಕೇಳಿಸಿಕೊಂಡಾಗ ಆತನ ದೇಹದಲ್ಲಿ ಚಲನವಲನ ಕಂಡುಬಂದಿದೆ. ಇದು ಆ ಆಸ್ಪತ್ರೆಯ ಹೊಸ ಚಿಕಿತ್ಸಾ ಪ್ರಯೋಗಕ್ಕೆ ಸಿಕ್ಕ ಪ್ರತಿಫಲವಾಗಿದೆಯಂತೆ.
ಇದು ನಂಬಲಸಾಧ್ಯವಾದರೂ ನಿಜವೇ. ಕರೀಂನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಮತ್ತು ದಾದಿಯರು ಸಂಗೀತ ಚಿಕಿತ್ಸಾ ವಿಧಾನವನ್ನು ಪ್ರಯತ್ನಿಸಿದ್ದಾರೆ. ಇದರಲ್ಲಿ ಯಶಸ್ಸನ್ನೂ ಕಂಡಿದ್ದಾರಂತೆ. ಆಸ್ಪತ್ರೆಯಲ್ಲಿನ ದಾದಿಯರು ಸಿನಿಮಾ ಹಾಡಿಗೆ ನೃತ್ಯ ಮಾಡಿ ರೋಗಿಗಳ ಮಾನಸಿಕ ಸ್ಥಿರತೆ ಮತ್ತು ದೈಹಿಕವಾಗಿ ಚಲನೆಯನ್ನು ತರುತ್ತಿದ್ದಾರಂತೆ.
ಕೋಮಾದಿಂದ ಜನರಲ್ ವಾರ್ಡ್ಗೆ ಶಿಫ್ಟ್.. ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ವಲಯದ ಗೊಲ್ಲಪಲ್ಲಿ ನಿವಾಸಿಯಾಗಿದ್ದ ಶ್ರೀನಿವಾಸ್ ಎಂಬುವವರು ಮೆದುಳಿಗೆ ಆಮ್ಲಜನಕದ ಕೊರತೆಯುಂಟಾಗಿ ಜಾಂಡೀಸ್ ರೋಗಕ್ಕೆ ತುತ್ತಾಗಿ ಕೋಮಾಕ್ಕೆ ಜಾರಿದ್ದರು. ಇವರ ರೋಗ ವಾಸಿ ಮಾಡಲು ಕುಟುಂಬಸ್ಥರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ ವಾಸಿಯಾಗಿರಲಿಲ್ಲ.
25 ದಿನಗಳ ಹಿಂದೆ ಕರೀಂನಗರ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಗೆ ಆ ರೋಗಿ ದಾಖಲಾಗಿದ್ದಾರೆ. ಕೋಮಾ ಸ್ಥಿತಿಯಲ್ಲಿದ್ದ ಶ್ರೀನಿವಾಸ್ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆಯಂತೆ. ಕೇವಲ ವೈದ್ಯಕೀಯ ಚಿಕಿತ್ಸಾ ವಿಧಾನದ ಮೂಲಕ ಮಾತ್ರ ಈ ವ್ಯಕ್ತಿಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದರಿತ ಅಲ್ಲಿನ ವೈದ್ಯರು ಮತ್ತು ದಾದಿಯರು, ಮಾನಸಿಕವಾಗಿಯೇ ಅವರನ್ನು ಜಾಗ್ರತೆ ಮಾಡಲು ಆ ರೋಗಿಗೆ ಕೇಳಿಸುವಂತೆ ಸಿನಿಮಾ ಹಾಡನ್ನು ಹಾಕಿದ್ದಾರೆ. ಅಲ್ಲದೇ, ದಾದಿಯರು ರೋಗಿಯ ಮುಂದೆ ನೃತ್ಯವನ್ನೂ ಮಾಡಿದ್ದಾರೆ.
ಈ ವೇಳೆ ತೀವ್ರ ಅಸ್ವಸ್ಥನಾಗಿ ಕೋಮಾ ಸ್ಥಿತಿಯಲ್ಲಿರುವ ಆ ರೋಗಿ ತನ್ನ ದೇಹದಲ್ಲಿ ಚಲನವಲನ ತೋರಿಸಿದ್ದಾನಂತೆ. ತಮ್ಮ ಈ ಹೊಸ ಚಿಕಿತ್ಸಾ ವಿಧಾನದಿಂದ ರೋಗಿ ಅಲ್ಪ ಚೇತರಿಕೆ ಕಂಡಿದ್ದು, ಅಲ್ಲಿನ ವೈದ್ಯರು, ದಾದಿಯರಿಗೇ ಖುಷಿ ತಂದಿದೆ. ಬಳಿಕ ಆ ರೋಗಿಯನ್ನು ಐಸಿಯುನಿಂದ ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಿ ಸಹಜ ಚಿಕಿತ್ಸೆ ಮುಂದುವರಿಸಿದ್ದಾರಂತೆ. ಸಂಗೀತಕ್ಕೆ ಕಲ್ಲು ಕರಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಕೋಮಾದಲ್ಲಿದ್ದ ರೋಗಿಯೊಬ್ಬ ಮಾತ್ರ ಕೈ ಕಾಲು ಆಡಿಸಿದ್ದು ಮಾತ್ರ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.