ಭುವನೇಶ್ವರ: ಒಡಿಶಾದ ಹವಾಮಾನ ಮತ್ತು ಪರಿಸರ ಡಾಲ್ಫಿನ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿದೆ. ಪ್ರತಿ ವರ್ಷ ಹೆಚ್ಚುತ್ತಿರುವ ಡಾಲ್ಫಿನ್‌ಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ. ಈ ವರ್ಷ ರಾಜ್ಯದಲ್ಲಿ ಡಾಲ್ಫಿನ್‌ಗಳ ಸಂಖ್ಯೆ ದ್ವಿಗುಣಗೊಂಡಿದೆ.
ರಾಜ್ಯದಲ್ಲಿ ಹಂಪ್‌ಬ್ಯಾಕ್ ಬಾಟಲ್‌ನೋಸ್ ಪ್ರಭೇದದ ಡಾಲ್ಫಿನ್‌ಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿದ್ದು, 2020ರ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 233 ಡಾಲ್ಫಿನ್‌ಗಳಿವೆ. 2021ರ ವೇಳೆಗೆ ಈ ಸಂಖ್ಯೆ 544ಕ್ಕೆ ಏರಿದೆ. ಚಿಲಿಕಾ, ರಾಜನಗರ, ಪುರಿ, ಭದ್ರಾಕ್ ಮತ್ತು ಬಾಲೇಶ್ವರ ವಿಭಾಗಗಳಲ್ಲಿ ವಿವಿಧ ಜಾತಿಗಳ ಡಾಲ್ಫಿನ್‌ಗಳನ್ನು ಗುರುತಿಸಲಾಗಿದೆ.
ಚಿಲಿಕಾ ಸರೋವರದಲ್ಲಿ 188, ರಾಜನಗರದಲ್ಲಿ 342, ಪುರಿಯಲ್ಲಿ 4, ಭದ್ರಾಕ್‌ನಲ್ಲಿ 8 ಮತ್ತು ಬಾಲೇಶ್ವರ ಕಾಡಿನಲ್ಲಿ 2 ಡಾಲ್ಫಿನ್‌ಗಳಿವೆ. 2020ರ ಗಣತಿಯ ಪ್ರಕಾರ, ರಾಜ್ಯದಲ್ಲಿ ಕೇವಲ ಎರಡು ಹಂಪ್‌ಬ್ಯಾಕ್ ಡಾಲ್ಫಿನ್‌ಗಳನ್ನು ಗುರುತಿಸಲಾಗಿತ್ತು. ಇದು ಈ ವರ್ಷ 14 ಪಟ್ಟು ಹೆಚ್ಚಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ 208 ಇರ್ರವಾಡಿ ಡಾಲ್ಫಿನ್‌ಗಳನ್ನು ಗುರುತಿಸಲಾಗಿತ್ತು. ಈ ವರ್ಷ ಇದರ ಸಂಖ್ಯೆ 209 ಆಗಿದೆ. ಬಾಟಲ್‌ನೋಸ್ ಡಾಲ್ಫಿನ್‌ಗಳ ಸಂಖ್ಯೆ ಈ ವರ್ಷ ದ್ವಿಗುಣಗೊಂಡಿದೆ. ಕಳೆದ ವರ್ಷ ಬಾಟಲ್ನೋಸ್ಗಳ ಸಂಖ್ಯೆ 23 ಇತ್ತು, ಈ ವರ್ಷ 56 ಆಗಿದೆ.
ಪ್ರತಿಕೂಲ ಹವಾಮಾನ ಮತ್ತು ದಟ್ಟವಾದ ಮಂಜಿನ ಕಾರಣದಿಂದ ಭದ್ರಾಕ್ ವಿಭಾಗವನ್ನು ಹೊರತುಪಡಿಸಿ, ಈ ವರ್ಷದ ಜನವರಿ 18ರಂದು ರಾಜ್ಯದ ಎಲ್ಲಾ ಭಾಗಗಳಲ್ಲಿ ಡಾಲ್ಫಿನ್ ಗಣತಿ ನಡೆಸಲಾಗಿದೆ. ಮತ್ತೊಮ್ಮೆ ಜನವರಿ 27, ಫೆಬ್ರವರಿ 5 ಮತ್ತು 12ರಂದು ಕೂಡ ಗಣತಿ ನಡೆಸಲಾಗಿದೆ. ಒಟ್ಟು 41 ತಂಡಗಳು ಡಾಲ್ಫಿನ್ ಗಣತಿಯಲ್ಲಿ ಭಾಗವಹಿಸಿದ್ದವು.