ಎರಡು ದಶಕಗಳ ಬಳಿಕ ಅಫ್ಘಾನಿಸ್ತಾನದ ಚಿತ್ರಣವೇ ಬದಲಾಗಿದೆ. ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರಿಂದ ರಕ್ಷಿಸಿಕೊಳ್ಳಲು ಅಲ್ಲಿನ ಪ್ರಜೆಗಳು ಪರದಾಡುತ್ತಿದ್ದಾರೆ.
ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ನುಗ್ಗಿ, ಕಾಲ್ತುಳಿತ, ಗುಂಡಿನ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಯಾ ದೇಶಗಳು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತಮ್ಮ ಪ್ರಜೆಗಳನ್ನು ಕರೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿವೆ.
ಅಧಿಕೃತ ಹೇಳಿಕೆಗಳು ಮತ್ತು ಸ್ಥಳೀಯ ವರದಿಗಳ ಪ್ರಕಾರ, ಇಲ್ಲಿಯವರೆಗೆ ಸುಮಾರು 28,000 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ. ಸ್ಥಳಾಂತರಿಸಲ್ಪಟ್ಟಿರುವ ಅಫ್ಘನ್ನರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡಲು ಅಮೆರಿಕ, ಭಾರತ, ಯುನೈಟೆಡ್ ಕಿಂಗ್‌ಡಮ್, ಡೆನ್ಮಾರ್ಕ್, ಜರ್ಮನಿ, ಇಟಲಿ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 13 ದೇಶಗಳು ಒಪ್ಪಿಕೊಂಡಿವೆ. ಉಳಿದ ದೇಶಗಳು ತಮ್ಮ ಪ್ರಜೆಗಳನ್ನು ಮಾತ್ರ ವಾಪಸ್ ಕರೆ ತರುತ್ತಿವೆ.
ಭಾರತಕ್ಕೆ ಬಂದವರೆಷ್ಟು?
ಭಾರತ ಮೂಲದ ಪ್ರಜೆಗಳು - ಅಧಿಕಾರಿಗಳು ಅಫ್ಘಾನಿಸ್ತಾನದ ಸಿಖ್ಖರು, ಹಿಂದೂಗಳು, ರಾಜಕಾರಣಿಗಳು ಸೇರಿ ಒಟ್ಟು 552 ಜನರನ್ನು ಕಾಬೂಲ್ನಿಂದ ಭಾರತಕ್ಕೆ ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳಲ್ಲಿ ಕರೆ ತರಲಾಗಿದೆ. ಒಟ್ಟು ಭಾರತದ 25 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಂದು ಕೂಡ 146 ಮಂದಿ ದೆಹಲಿಗೆ ಬಂದಿಳಿದಿದ್ದಾರೆ.
ಅಮೆರಿಕಕ್ಕೆ ಪಲಾಯನವಾದವರೆಷ್ಟು?
ಕಳೆದೊಂದು ವಾರದಲ್ಲಿ ಒಟ್ಟು 17,000 ಜನರನ್ನು ಅಫ್ಘಾನಿಸ್ತಾನದಿಂದ ನೆಲದಿಂದ ಯುಸ್ಗೆ ಸ್ಥಳಾಂತರಿಸಲಾಗಿದ್ದು, ಇದರಲ್ಲಿ 2,500 ಮಂದಿ ಅಮೆರಿಕನ್ನರು ಎಂದು ಯುಎಸ್ ಸೇನೆಯ ಮೇಜರ್ ಜನರಲ್ ಹ್ಯಾಂಕ್ ಟೇಲರ್ ಅಂಕಿ ಅಂಶಗಳನ್ನು ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲೆಂದು ಸಾವಿರಾರು (5,800) ಸೈನಿಕರನ್ನು ನಿಯೋಜಿಸಿರುವ ಯುಎಸ್, ಆಗಸ್ಟ್ 31 ರೊಳಗೆ ಸ್ಥಳಾಂತರಿಸುವಿಕೆ ಪೂರ್ಣಗೊಳಿಸಲು ಗಡುವು ನೀಡಿದೆ. ಬೈಡನ್ ಆಡಳಿತದ ಅಧಿಕಾರಿಗಳ ಮಾಹಿತಿ ಪ್ರಕಾರ 15,000 ಅಮೆರಿಕನ್ನರು ಸೇರಿ ಇನ್ನೂ 50,000 ರಿಂದ 60,000 ಜನರನ್ನು ಅಮೆರಿಕಕ್ಕೆ ಕರೆ ತರಬೇಕಿದೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ಗೆ ತೆರಳುತ್ತಿದ್ದ ಅಮೆರಿಕ ಪ್ರಜೆಗಳನ್ನು ಥಳಿಸಿದ ತಾಲಿಬಾನ್..
ಆದರೆ, ಅಫ್ಘನ್ನಲ್ಲಿರುವ ತನ್ನ ಪ್ರಜೆಗಳಿಗೆ ಭದ್ರತಾ ಸಲಹೆ ಬಿಡುಗಡೆ ಮಾಡುವಂತೆ ಅಮೆರಿಕಕ್ಕೆ ಐಸಿಸ್ (ISIS) ಉಗ್ರರು ಬೆದರಿಕೆ ಹಾಕಿದ್ದು, ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಬೇಡಿ ಎಂದು ತನ್ನ ನಾಗರಿಕರಿಗೆ ಯುಎಸ್ ತಿಳಿಸಿದೆ. ಆದಾಗ್ಯೂ ನಿನ್ನೆ ಕಾಬೂಲ್ನಲ್ಲಿ ಯುಎಸ್ ನಿರ್ವಹಣೆಯಡಿಯಿರುವ ವಿಮಾನ ನಿಲ್ದಾಣವನ್ನು ತಲುಪಲು ಅಮೆರಿಕ ಪ್ರಜೆಗಳು ಯತ್ನಿಸಿದ್ದು, ಈ ವೇಳೆ ತಾಲಿಬಾನ್ ಉಗ್ರರು ಅವರನ್ನು ಥಳಿಸಿದ್ದಾರೆ ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಹೇಳಿದ್ದರು.
ಅಫ್ಘಾನಿಸ್ತಾನದಿಂದ ಆಯಾ ದೇಶಗಳಿಗೆ ಬಂದ ಜನರ ಅಂಕಿ-ಅಂಶಗಳು ಇಲ್ಲಿದೆ..
ರಾಷ್ಟ್ರಗಳು | ಸ್ಥಳಾಂತರಗೊಂಡವರು |
ಅಮೆರಿಕ | 17,000 |
ಯುನೈಟೆಡ್ ಕಿಂಗ್‌ಡಮ್ | 3,821 |
ಜರ್ಮನಿ | 2,000 |
ಪಾಕಿಸ್ತಾನ | 1,100 |
ಇಟಲಿ | 1,000 |
ಟರ್ಕಿ | 583 |
ಫ್ರಾನ್ಸ್ | 570 |
ಭಾರತ | 552 |
ಡೆನ್ಮಾರ್ಕ್ | 404 |
ನೆದರ್ಲ್ಯಾಂಡ್ | 300 |
ಆಸ್ಟ್ರೇಲಿಯಾ | 300 |
ಕೆನಡಾ | 294 |
ಸ್ಪೇನ್ | 273 |
ಪೋಲ್ಯಾಂಡ್ | 260 |
ಜೆಕ್ ಗಣರಾಜ್ಯ | 170 |
ಉಕ್ರೇನ್ | 83 |
ಹಂಗೇರಿ | 26 |
ಇಂಡೋನೇಷ್ಯಾ | 26 |
ರೊಮಾನಿಯಾ | 14 |
ಜಪಾನ್ | 12 |