ಕೊಲ್ಲಂ: ಕೇರಳದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಕ್ಷದ ಚಿಹ್ನೆಗಳೇ ಉಪಹಾರಗಳಾಗಿವೆ.
ಹೌದು, ಪಕ್ಷದ ಚಿಹ್ನೆಗಳು, ಅಭ್ಯರ್ಥಿ ಭಾವಚಿತ್ರಗಳು ಬಿಸಿ ದೋಸೆಗಳಲ್ಲಿ ಮೂಡಿಬರುತ್ತಿವೆ. ದೋಸೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಚಿಹ್ನೆಗಳು ಅರಳುತ್ತಿವೆ. ಈ ರೀತಿಯ ಹೊಸ ಆಯಾಮಕ್ಕೆ ಇಲ್ಲಿನ ಹೋಟೆಲ್ವೊಂದು ಸಾಕ್ಷಿಯಾಗಿದೆ.
ಕಲಾತ್ಮಕವಾಗಿ ಚಿತ್ರಿಸಿದ ಪಕ್ಷದ ಚಿಹ್ನೆಗಳು ಮತ್ತು ಬಿಸಿ ದೋಸೆಗಳಲ್ಲಿ ಅಭ್ಯರ್ಥಿಗಳ ಮುಖಗಳು ಗಮನ ಸೆಳೆಯುತ್ತಿವೆ. ಕೊಲ್ಲಂ ಬೀಚ್ ರಸ್ತೆಯಲ್ಲಿರುವ '101 ವೆರೈಟಿ ದೋಸಾ' ಮಾಲೀಕನೋರ್ವ ಜನರನ್ನು ಸೆಳೆಯುತ್ತಿದ್ದಾರೆ.
ಟೊಮೆಟೊ ಸಾಸ್, ಕ್ಯಾರೆಟ್ ಮತ್ತು ಮೇಯನೇಸ್ನಲ್ಲಿ ಎಡಪಕ್ಷದ ಚಿಹ್ನೆಗಳಾದ ಕುಡುಗೋಲು, ಸುತ್ತಿಗೆ ಮತ್ತು ನಕ್ಷತ್ರ ಇದ್ದರೆ, ಕಾಂಗ್ರೆಸ್ ಪಕ್ಷದ ಚಿಹ್ನೆಗಳು ಬಿಸಿ ದೋಸೆಗಳಾಗಿ ಕಬ್ಬಿಣದ ತವಾದಲ್ಲಿ ಗರಿಗರಿಯಾದಂತೆ ಸರಳ ತುರಿದ ಕ್ಯಾರೆಟ್‌ನೊಂದಿಗೆ ಬೇಯುತ್ತಿವೆ. ಹಾಗೆ ಇಲ್ಲಿ ಕಮಲವೂ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಹಾಗೆ ಅಭ್ಯರ್ಥಿಗಳ ಮುಖಗಳು ಕೂಡ ದೋಸೆಯಲ್ಲಿ ಮೂಡಿ ಬರುತ್ತಿದ್ದು, ಜನರು ಇವನ್ನು ತಿನ್ನಲು ಮುಗಿ ಬೀಳುತ್ತಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಮೋಡಿ ಮಾಡುತ್ತಿವೆ ಮೋದಿ - ಮಮತಾ ಸಿಹಿ ತಿಂಡಿ
ಅಭ್ಯರ್ಥಿಗಳ ಮುಖಗಳನ್ನು ಸಹ ಬೇಡಿಕೆಯಂತೆ ಚಿತ್ರಿಸಲಾಗುತ್ತದೆ. ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಅಭ್ಯರ್ಥಿ ಮತ್ತು ನಟ ಮುಖೇಶ್ ಅವರ ಭಾವಚಿತ್ರವನ್ನು ಇಲ್ಲಿ ಮೊದಲ ಬಾರಿಗೆ ದೋಸೆ ಮೇಲೆ ಇಳಿಸಲಾಗಿತ್ತು. ಈ ದೋಸಾ ಮಾಸ್ಟರ್ ಸಂತೋಷ್ ಮತ್ತು ಹೋಟೆಲ್ ಮಾಲೀಕ ಶ್ಯಾಮ್ ಒಟ್ಟಾಗಿ ಸೇರಿ ಈ ವಿನೂತನ ಕೆಲಸ ಮಾಡುತ್ತಿದ್ದಾರೆ.
ಇಷ್ಟೇ ಅಲ್ಲದೆ, ಐದು ಅಡಿ ಉದ್ದವಿರುವ ಒಂದೇ ದೋಸೆಯಲ್ಲಿ ಎಲ್ಲಾ ಚಿಹ್ನೆಗಳನ್ನು ಪ್ರಸ್ತುತಪಡಿಸುವ ಮೂಲಕ ಇವರಿಬ್ಬರು ದೋಸೆ ಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚುನಾವಣಾ ಸಮಯದಲ್ಲಿ ವಿಭಿನ್ನವಾಗಿ ಏನನ್ನಾದರೂ ಮಾಡುವ ಆಲೋಚನೆಯು ಈ ಮುಖಾಂತರ ಹೊರಬಂತು ಎಂದು ಮಾಲೀಕ ಶ್ಯಾಮ್ ಹೇಳುತ್ತಾರೆ.