ಬೆಂಗಳೂರು: ''ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ರಾಜ್ಯಕ್ಕೆ ಬರ ಪರಿಹಾರವನ್ನು ರಾಷ್ಟ್ರೀಯ ವಿಪತ್ತು ನಿಧಿ (ಎನ್‌ಡಿಆರ್‌ಎಫ್) ಉನ್ನತಾಧಿಕಾರಿಗಳ ಸಮಿತಿ ನಿರ್ಧರಿಸಿದ ನಂತರ ನೀಡಲಾಗುವುದು'' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕ ಸರ್ಕಾರಕ್ಕೆ ಹಣ ಬಿಡುಗಡೆ ವಿಳಂಬದ ಆರೋಪಕ್ಕೆ ಪ್ರತಿಕ್ರಿಯಿಸಿ, ''ನರೇಂದ್ರ ಮೋದಿ ಅವರು 10 ವರ್ಷಕ್ಕೂ ಹೆಚ್ಚು ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರಿಂದ, ಎಲ್ಲಾ ರಾಜ್ಯಗಳಿಗೂ ಸಕಾಲದಲ್ಲಿ ಹಣ ಬಿಡುಗಡೆ ನೀಡಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸುಮ್ಮನೆ ಆರೋಪಗಳನ್ನು ಮಾಡಬಾರದು. ನನಗೆ ಮನವಿ ಪತ್ರ ತಲುಪುವ ಮೊದಲು ಸಚಿವರು ಅಥವಾ ಮುಖ್ಯಮಂತ್ರಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಬಹುದು. ನಾನು ಎರಡು ದಿನಗಳ ಹಿಂದೆ, ಕೇರಳದಲ್ಲಿದ್ದಾಗ ಈ ವಿಚಾರ ಗಮನಕ್ಕೆ ಬಂದಿಂದೆ'' ಎಂದರು.
''ನಮ್ಮ ಕಡೆಯಿಂದ ಕರ್ನಾಟಕಕ್ಕೆ ಏನೂ ಬಾಕಿ ಇಲ್ಲ. ನಾನು ರಾಜ್ಯದ ಸಂಸದೆ, ನನಗೂ ಜವಾಬ್ದಾರಿ ಇದೆ. ಯಾವುದನ್ನೂ ಬಾಕಿ ಉಳಿಸಿಕೊಂಡಿಲ್ಲ. ಕಾಂಗ್ರೆಸ್ ಆರೋಪಗಳು ಸತ್ಯಕ್ಕೆ ದೂರವಾಗಿವೆ'' ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 23 ಇಲಾಖೆಗಳಲ್ಲಿ 61 ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದೆ. ಕರ್ನಾಟಕದ ತೆರಿಗೆ ಪಾಲು ಕಡಿತಗೊಳಿಸುವ ಮೂಲಕ ನಮ್ಮ ರಾಜ್ಯಕ್ಕೆ ಹೊರೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ಆರೋಪಿಸಿದ್ದರು.
ಸಮಿತಿಯ ತೀರ್ಮಾನದ ನಂತರ ರಾಜ್ಯಕ್ಕೆ ಪರಿಹಾರ- ಸೀತಾರಾಮನ್: ಕರ್ನಾಟಕಕ್ಕೆ ಬರ ಪರಿಹಾರಕ್ಕಾಗಿ ಎನ್‌ಡಿಆರ್‌ಎಫ್ ಹಣ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಅವರು, "ಎನ್‌ಡಿಆರ್‌ಎಫ್‌ಗೆ ಸಮಿತಿ ಇದೆ. ಗೃಹ ಸಚಿವರು ಅದನ್ನು ಪರಿಶೀಲಿಸುತ್ತಾರೆ. ನನ್ನನ್ನು ಸಚಿವ ಕೃಷ್ಣ ಭೈರೇಗೌಡ ಬಂದು ಭೇಟಿ ಮಾಡಿದ್ದರು. ನಾನು ಅವರಿಗೆ ಈಗಾಗಲೇ ವಿವರಣೆ ನೀಡಿದ್ದೇನೆ. ಖರ್ಚು ಮಾಡಲು ಎಸ್‌ಡಿಆರ್‌ಎಫ್ ಹಣ ರಾಜ್ಯ ಸರ್ಕಾರದ ಕೈಯಲ್ಲಿದೆ. ಎನ್‌ಡಿಆರ್‌ಎಫ್ ಹಣ ಹಾಗೆೇ ಬಿಡುಗಡೆ ಮಾಡಲು ಬರುವುದಿಲ್ಲ. ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿ ವರದಿ ನೀಡಿದೆ. ಜೊತೆಗೆ ಉನ್ನತ ಅಧಿಕಾರಿಗಳ ಸಮಿತಿಯು ತೀರ್ಮಾನ ಮಾಡಿದ ತಕ್ಷಣವೇ ರಾಜ್ಯಕ್ಕೆ ಪರಿಹಾರ ದೊರೆಯಲಿದೆ'' ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸರ್ಕಾರವು ರಾಜ್ಯದ ಒಟ್ಟು 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. NDRF ಮಾನದಂಡಗಳ ಪ್ರಕಾರ ಬರ ಪರಿಹಾರ ಹಣ ಬಿಡುಗಡೆ ವಿಳಂಬಕ್ಕಾಗಿ ರಾಜ್ಯ ಸರ್ಕಾರ ಪದೇ ಪದೇ ಕೇಂದ್ರದ ಮೇಲೆ ವಾಗ್ದಾಳಿ ಮಾಡುತ್ತಿದೆ.
ಇದನ್ನೂ ಓದಿ: ತೆಲಂಗಾಣ ಚುನಾವಣೋತ್ತರ ಸಮೀಕ್ಷೆ: 'ಕೈ' ಗೆ ಸಿಹಿ, ಬಿಆರ್ಎಸ್ ಹ್ಯಾಟ್ರಿಕ್ ಕನಸಿಗೆ ಹಿನ್ನಡೆ, ಬಿಜೆಪಿಗೆ ಎಷ್ಟು ಸ್ಥಾನ?