ನವದೆಹಲಿ: ರಷ್ಯಾದೊಂದಿಗೆ ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ಸಂಬಂಧವನ್ನು ಹೊಂದಿರುತ್ತದೆ. ಆ ಸಂಬಂಧಗಳಲ್ಲಿ ಅಮೆರಿಕ ಯಾವುದೇ ಬದಲಾವಣೆಯನ್ನು ಬಯಸುವುದಿಲ್ಲ ಎಂದು ಅಮೆರಿಕನ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ (ವಿದೇಶಾಂಗ ಇಲಾಖೆ) ವಕ್ತಾರ ನೆಡ್ ಪ್ರೈಸ್ ಸ್ಪಷ್ಟನೆ ನೀಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ಬೆನ್ನಲ್ಲೇ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ನೆಡ್ ಪ್ರೈಸ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ವಿವಿಧ ದೇಶಗಳು ರಷ್ಯಾದ ಒಕ್ಕೂಟದೊಂದಿಗೆ ತಮ್ಮದೇ ಆದ ಸಂಬಂಧವನ್ನು ಹೊಂದಿವೆ. ಐತಿಹಾಸಿಕವಾಗಿ ಆಗಿರಬಹುದು, ಭೌಗೋಳಿಕವಾಗಿಯಾದರೂ ಆಗಿರಬಹುದು. ನಾವು ಬದಲಾಯಿಸಲು ಬಯಸುತ್ತಿರುವ ವಿಷಯ ಇದಲ್ಲ. ಭಾರತವೇ ಆಗಿರಲಿ ಅಥವಾ ಪ್ರಪಂಚದ ಯಾವುದೇ ರಾಷ್ಟ್ರ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಿಂದ ಮಾತನಾಡುವಂತೆ ಮಾಡಬೇಕಾಗಿದೆ ಎಂದು ನೆಡ್ ಪ್ರೈಸ್ ಹೇಳಿದ್ದಾರೆ.
ಅನ್ಯಾಯದ, ಅಪ್ರಚೋದಿತ, ಪೂರ್ವಯೋಜಿತ ಆಕ್ರಮಣದ ವಿರುದ್ಧ ಗಟ್ಟಿಯಾಗಿ ಮಾತನಾಡುವುದು, ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುವುದು, ಮುಂತಾದ ವಿಚಾರಕ್ಕೆ ಸಂಬಂಧಿಸಿಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳು ತಮಗಿರುವ ಮಿತಿಗಳನ್ನು ಬಳಸುತ್ತವೆ. ರಷ್ಯಾದ ಒಕ್ಕೂಟದೊಂದಿಗಿನ ಉತ್ತಮ ಸಂಬಂಧದ ಕೊರತೆಯಿಂದ ನಮಗೆ ಹತ್ತಿರವಾಗಿರುವ ದೇಶಗಳೂ ಇವೆ ಎಂದು ನೆಡ್ ಪ್ರೈಸ್ ಹೇಳಿದ್ದಾರೆ.
ರಷ್ಯಾದೊಂದಿಗೆ ವ್ಯಾಪಾರಕ್ಕಾಗಿ ರೂಪಾಯಿ ಮತ್ತು ರೂಬಲ್ ಅನ್ನು ಬಳಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನೆಡ್ ಪ್ರೈಸ್ ಇಂಥಹ ವಿಚಾರದಲ್ಲಿ ನಾನು ಅಮೆರಿಕದೊಂದಿಗೆ ಭಾರತದ ಪಾಲುದಾರಿಕೆಯನ್ನು ಉಲ್ಲೇಖಿಸುತ್ತೇನೆ. ಕ್ವಾಡ್‌ನ ಪ್ರಮುಖ ತತ್ವಗಳಲ್ಲಿ ಮುಕ್ತ ಇಂಡೋ-ಪೆಸಿಫಿಕ್ ಪ್ರಮುಖವಾಗಿದ್ದು, ನಾಲ್ಕು ದೇಶಗಳು ಒಟ್ಟಾಗಿ, ಈ ಕುರಿತು ಕೆಲಸ ಮಾಡುತ್ತಿವೆ. ಆದರೆ ಅವರವರ ಹಿತಾಸಕ್ತಿಗೆ ತಕ್ಕಂತೆ, ಆಯಾ ರಾಷ್ಟ್ರಗಳು ಇರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, ಎರಡು ದಿನಗಳ ಭೇಟಿಗಾಗಿ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ. ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಸ್ತುತ ಭಾರತವು ರಷ್ಯಾದ ಆಕ್ರಮಣವನ್ನು ಖಂಡಿಸದ ಕಾರಣದಿಂದ ರಷ್ಯಾದ ಬಗ್ಗೆ ಭಾರತದ ನಿಲುವು ಜಾಗತಿಕ ಚರ್ಚೆಯ ವಿಚಾರವಾಗಿ ಮಾರ್ಪಟ್ಟಿದೆ. ರಷ್ಯಾದ ವಿದೇಶಾಂಗ ಸಚಿವರ ಭಾರತ ಭೇಟಿಯನ್ನು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೊ ಟೀಕಿಸಿದ್ದು, ಈ ನಡೆ 'ತೀವ್ರ ನಿರಾಶಾದಾಯಕ ಎಂದಿದ್ದರು. ಅದರ ಜೊತೆಗೆ ರಷ್ಯಾದಿಂದ ತನ್ನ ತೈಲ ಆಮದುಗಳನ್ನು ಹೆಚ್ಚಿಸುವುದರ ವಿರುದ್ಧ ಭಾರತಕ್ಕೆ ಅಮೆರಿಕ ಎಚ್ಚರಿಕೆ ಕೂಡಾ ನೀಡಿತ್ತು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ವಿಚಾರವಾಗಿ ಭಾರತ ಏನು ಮಾಡಬೇಕೆಂದು ಹೇಳುವುದಿಲ್ಲ: ಬ್ರಿಟನ್