ಕಾಸರಗೋಡು (ಕೇರಳ) : ಕಾಸರಗೋಡಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಭಾಗವಾಗಿ ಬಸ್ ತಂಗುದಾಣ ಕೆಡವಲಾಗಿದೆ. ಹೀಗಾಗಿ, ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರು ಬಿಸಿಲು ಇಲ್ಲವೇ ಮಳೆಯನ್ನೇ ತಾಳಿಕೊಂಡು ಬಯಲಿನಲ್ಲಿ ಬಸ್‌ಗಾಗಿ ಕಾಯುವಂತಾಗಿದೆ.
ಇದನ್ನರಿತ ಪೆರಿಯದ ಯುವಕರ ತಂಡ ವಿಶಿಷ್ಟ ಉಪಾಯವನ್ನು ಮಾಡಿದೆ. ಮೊಬೈಲ್ ಬಸ್ ವೇಟಿಂಗ್ ಶೆಡ್ ನಿರ್ಮಿಸಲು ಯುವಕರು ಯೋಜಿಸಿದ್ದಾರೆ. ಅಂತೆಯೇ ಈ ಶೆಡ್ ನಿರ್ಮಿಸಲು ಬೇಕಾದ ಹಣವನ್ನು ಈ ಪ್ರದೇಶದ ವ್ಯಾಪಾರಿಗಳು ಮತ್ತು ಸಾಮಾಜಿಕ ಸಂಸ್ಥೆಗಳನ್ನು ಸಂಪರ್ಕಿಸಿ ಸಂಗ್ರಹಿಸಿದ್ದಾರೆ. ಇದೇ ಹಣದಲ್ಲಿ ವಿನೂತನವಾದ ಮೊಬೈಲ್ ಬಸ್ ತಂಗುದಾಣವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ಏನಿದು ಮೊಬೈಲ್ ಬಸ್ ವೇಟಿಂಗ್ ಶೆಡ್ ?: ಈ ಶೆಡ್ ಅನ್ನು ಮೋಟಾರ್ಬೈಕಿಗೆ ಅಳವಡಿಸಿ ಯಾವುದೇ ಸ್ಥಳಕ್ಕೆ ಸ್ಥಳಾಂತರಿಸಬಹುದು. ಪ್ರಯಾಣಿಕರ ಬೇಡಿಕೆ ಮತ್ತು ನೂಕುನುಗ್ಗಲು ಆಧರಿಸಿ ಬಸ್ ಶೆಡ್ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತದೆ. ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳನ್ನು ಸಹ ಹೊಂದಿದೆ. ಈ ಸಂಚಾರಿ ಬಸ್ ವೇಟಿಂಗ್ ಶೆಡ್ ಅನ್ನು 10 ದಿನಗಳಲ್ಲಿ ನಿರ್ಮಿಸಲಾಗಿದೆ ಮತ್ತು ಇದೀಗ ಪೆರಿಯಾ ಪ್ರದೇಶದಲ್ಲಿ ಇದು ಭಾರಿ ಪ್ರಸಿದ್ಧವಾಗಿದೆ.
ಓದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ