ಪಾಟ್ನಾ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಲು ಕಾಂಗ್ರೆಸ್ ಪಕ್ಷ 'ಇಂಡಿಯಾ' ಎಂಬ ಹೆಸರಿನಲ್ಲಿ 26 ಪಕ್ಷಗಳನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು. ಇಂಡಿಯಾ ಎಂಬ ಹೆಸರಿನ ಕಾಂಗ್ರೆಸ್ ಸಭೆಯನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ವ್ಯಂಗ್ಯವಾಡಿದ್ದು, ಇದು ದೇಶವನ್ನು ಲೂಟಿ ಮಾಡಲು ಬಯಸುತ್ತಿರುವ ಈಸ್ಟ್ ಇಂಡಿಯಾ ಕಂಪನಿಯಾಗಿದೆ ಎಂದು ಹೇಳಿದ್ದಾರೆ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮಾಡಿ ದೇಶವನ್ನು ಲೂಟಿ ಮಾಡಿದ ರೀತಿ, ದೇಶವನ್ನು ಲೂಟಿ ಮಾಡಲು ಭ್ರಷ್ಟರೆಲ್ಲ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ಲೂಟಿ ಮಾಡಿತ್ತು. ಈಗ ಭಾರತ ಎಂಬ ಹೆಸರನ್ನು ಬದಲಿಸಿ ದೇಶವನ್ನು ಲೂಟಿ ಮಾಡಲು ಯತ್ನಿಸುತ್ತಿದೆ. ಹಾಗಾಗಿ ಇಂಡಿಯಾ ಹೆಸರನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ದೇಶದ ಜನರು ಅವರನ್ನು ಕ್ಷಮಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ, ಸ್ಪೆಷಲ್ 26 ಎಂಬ ಹೆಸರಿನೊಂದಿಗೆ ಚಲನಚಿತ್ರವೊಂದು ಬಿಡುಗಡೆಯಾಗಿತ್ತು. ವಿರೋಧ ಪಕ್ಷದ ನಾಯಕರು ದೇಶದಲ್ಲಿ ಅದನ್ನೇ ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ.
ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾಗೆ ಬೇಗನೆ ಮರಳಿದ್ದಕ್ಕಾಗಿ ಮದುವೆಗೂ ಮುನ್ನ ವರ ಮಂಟಪ ಬಿಟ್ಟು ಹೋದರೆ ಹೇಗೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಒಬಿಸಿ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ನಿಖಿಲ್ ಆನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಎಡ ಉದಾರವಾದಿಗಳಿಗೆ ಸೇರಿದ ಎಲ್ಲ ರಾಜಕೀಯ ಪಕ್ಷಗಳು ಎಎಪಿ, ಕಾಂಗ್ರೆಸ್, ಆರ್‌ಜೆಡಿ, ಜೆಡಿಯು, ಎಸ್‌ಪಿ ಸಮಾಜವಾದಿಯಂತಹ ಕೆಲವು ರಾಜಕೀಯ ಪಕ್ಷಗಳು ಆರ್ಟಿಕಲ್ 370 ಮತ್ತು 35A ತೆಗೆದುಹಾಕುವ ಗುರಿ ಹೊಂದಿವೆ. ಅದಕ್ಕೂ ಮಿಗಿಲಾಗಿ ಪ್ರಧಾನಿ ಮೋದಿ ಅವರನ್ನು ಸೋಲಿಸುವುದು ಅವರ ಏಕೈಕ ಗುರಿಯಾಗಿದೆ. ಆದರೆ ಪ್ರಧಾನಿ ಮೋದಿ ಅವರ ಗುರಿ ದೇಶದ ಅಭಿವೃದ್ಧಿ ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದಾಗಿದೆ. ಅಲ್ಲದೇ ಎಸ್‌ಸಿ, ಎಸ್‌ಟಿ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿರುವ ಏಕೈಕ ನಾಯಕ ಕೂಡ ಪ್ರಧಾನಿ ಮೋದಿ ಎಂದು ಹೇಳಿದರು.
ಬಿಹಾರ ಘಟಕದ ಬಿಜೆಪಿ ವಕ್ತಾರ ಅರವಿಂದ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷವು ಬ್ರಿಟಿಷರ ನೀತಿಗಳ ಮೇಲೆ ನಡೆಯುತ್ತದೆ ಎಂದು ನಾನು ಸಿಎಂ ನಿತೀಶ್ ಕುಮಾರ್ ಅವರಿಗೆ ಹೇಳಲು ಬಯಸುತ್ತೇನೆ. ನೀವು ಬಹಳ ನಿರೀಕ್ಷೆಯಿಂದ ಕಾಂಗ್ರೆಸ್ನ ಜಂಟಿ ಸಭೆಗೆ ಬೆಂಗಳೂರಿಗೆ ಹೋಗಿದ್ದೀರಿ. ಆದರೆ ನಿಮಗೆ ಅದರಿಂದ ಏನೂ ಸಿಗಲಿಲ್ಲ. ನಿಮ್ಮನ್ನು ಅವಮಾನಿಸಿದರು. ಮುಂದಿನ ಬಾರಿ ಇಲ್ಲಿ ನೀವು ಗೆಲ್ಲುವುದು ಅಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಚಾರ್ಜ್‌ಶೀಟ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕರ್ಮಕಾಂಡ ಬಯಲು