ನವದೆಹಲಿ: ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ 40 ಲಕ್ಷ ಭಾರತೀಯರು ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದು, ಮೃತರ ಎಲ್ಲಾ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಮತ್ತೊಮ್ಮೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಟ್ವಿಟರ್ನಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್‌ಶಾಟ್ ಅನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಲ್ಲಿ ಕೋವಿಡ್ ಸೋಂಕಿನಿಂದ ಒಟ್ಟು ಸಾವು ಪ್ರಕರಣಗಳ ಸಂಖ್ಯೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಯತ್ನಿಸುತ್ತಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನಕ್ಕೆ ಭಾರತ ಅಡ್ಡಗಾಲು ಹಾಕುತ್ತಿದೆ ಎಂದು ಸ್ಕ್ರೀನ್ಶಾಟ್ನಲ್ಲಿ ಉಲ್ಲೇಖಿಸಲಾಗಿದೆ.
ಮೋದಿಜೀ ಸತ್ಯವನ್ನು ಮಾತನಾಡುವುದಿಲ್ಲ ಮತ್ತು ಇತರರನ್ನೂ ಸತ್ಯ ಮಾತನಾಡಲು ಬಿಡುವುದಿಲ್ಲ. ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಅವರು ಇನ್ನೂ ಸುಳ್ಳು ಹೇಳುತ್ತಾರೆ ಎಂದು ಟ್ವಿಟರ್ನಲ್ಲಿ ರಾಹುಲ್ ಗಾಂದಿ ಆರೋಪಿಸಿದ್ದಾರೆ. ಕೋವಿಡ್ನಿಂದ 40 ಲಕ್ಷ ಮಂದಿ ಭಾರತೀಯ ಮೃತಪಟ್ಟಿದ್ದಾರೆ ಎಂದು ನಾನು ಈ ಮೊದಲೇ ಹೇಳಿದ್ದೆನು. ಪ್ರಧಾನಿ ಮೋದಿಯವರು ನಿಮ್ಮ ಜವಾಬ್ದಾರಿಯನ್ನು ಪೂರೈಸಿ, ಪ್ರತಿ ಸಂತ್ರಸ್ತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಭಾರತದಲ್ಲಿ ಕೋವಿಡ್ ಸೋಂಕಿನಿಂದ ಉಂಟಾದ ಸಾವುಗಳನ್ನು ಅಂದಾಜು ಮಾಡುವ ವಿಶ್ವ ಆರೋಗ್ಯ ಸಂಸ್ಥೆಯ ವಿಧಾನವನ್ನು ಭಾರತ ಶನಿವಾರ ಪ್ರಶ್ನಿಸಿದೆ. ಭೌಗೋಳಿಕ ಗಾತ್ರ ಮತ್ತು ಜನಸಂಖ್ಯೆ ಹೆಚ್ಚಿರುವ ರಾಷ್ಟ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕ ಅನ್ವಯಿಸಬಾರದು ಎಂದು ಭಾರತ ಹೇಳಿತ್ತು. ಭಾರತದ ಹೇಳಿಕೆಯನ್ನು ಉಲ್ಲೇಖಿಸಿ ಏಪ್ರಿಲ್ 16ರಂದು ವಾಷಿಂಗ್ಟನ್ ಪೋಸ್ಟ್ ಭಾರತವು ಕೋವಿಡ್ ಸಾವು ಸಂಖ್ಯೆಯನ್ನು ಬಹಿರಂಗಪಡಿಸಲು ಒಪ್ಪುತ್ತಿಲ್ಲ ಎಂದು ವರದಿ ಮಾಡಿತ್ತು. ಇದೇ ವರದಿಯನ್ನು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮಿಷನ್ 150 ತಲುಪುವ ವಿಶ್ವಾಸವಿದೆ: ಜೆ.ಪಿ.ನಡ್ಡಾ