ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ದೇಶದ ವಿವಿಧ ಭಾಗದ 34 ಜನರು ಕಣಿವೆ ಪ್ರದೇಶದಲ್ಲಿ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಇಂದು ಮಾಹಿತಿ ನೀಡಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಗಿನವರು ಈವರೆಗೂ ಎಷ್ಟು ಮಂದಿ ಆಸ್ತಿ ಮಾಡಿದ್ದಾರೆ ಎಂದು ಬಿಎಸ್ಪಿ ಸಂಸದ ಹಾಜಿ ಫಜ್ಲುರ್ ರೆಹಮಾನ್ ಅವರ ಪ್ರಶ್ನೆಗೆ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಉತ್ತರಿಸಿದರು.
370ನೇ ವಿಧಿ ರದ್ದಾದ ಬಳಿಕ ಅಲ್ಲಿನ ಆಸ್ತಿಗಳನ್ನು ಖರೀದಿ ಮಾಡಲು ಎಲ್ಲರಿಗೂ ಅವಕಾಶ ಸಿಕ್ಕಿದ್ದು, ಈವರೆಗೂ 34 ಜನರು ಆಸ್ತಿ ಪಡೆದುಕೊಂಡಿದ್ದಾರೆ. ಕಣಿವೆ ನಾಡಿನ ಹೊರತಾದ ಈ 34 ಜನರ ಆಸ್ತಿಗಳು ಜಮ್ಮು, ರಿಯಾಸಿ, ಉಧಂಪುರ ಮತ್ತು ಗಂದರ್ಬಾಲ್ ಜಿಲ್ಲೆಗಳಲ್ಲಿವೆ ಎಂದು ಸಚಿವರು ವಿವರ ನೀಡಿದರು.
ಆರ್ಟಿಕಲ್ 370 ರದ್ದತಿಯ ನಂತರ ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರವನ್ನು ಇಬ್ಭಾಗ ಮಾಡಿ ಲಡಾಖ್ ಅನ್ನು ಪ್ರತ್ಯೇಕವಾಗಿ ಸೃಷ್ಟಿಸಿ ಎರಡಕ್ಕೂ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಿದೆ. ಕಣಿವೆ ಪ್ರದೇಶದಲ್ಲದವರೂ ಕೂಡಾ ಇಲ್ಲಿ ಭೂಮಿ ಮತ್ತು ಆಸ್ತಿಗಳನ್ನು ಖರೀದಿ ಮಾಡಲು ಸರ್ಕಾರ ಹೊಸ ಭೂ ಸಂಗ್ರಹಣೆ ಕಾನೂನು ಜಾರಿ ಮಾಡಿದೆ.
ಇದನ್ನೂ ಓದಿ: ದುಬೈ ಬಳಿಕ ಚಿನ್ನ ಕಳ್ಳಸಾಗಣೆಗೆ ಹೊಸ ಮಾರ್ಗ: ದೆಹಲಿಗೆ ಬಂದಿಳಿದ ಕೀನ್ಯಾ ಪ್ರಜೆಗಳಲ್ಲಿತ್ತು 15 ಕೆಜಿ ಬಂಗಾರ!