ನವದೆಹಲಿ/ನೋಯ್ಡಾ: ವಿಶೇಷ ಎನ್ನಿಸುವ 'ಡಿಜಿಟಲ್ ರೇಪ್' ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ನೋಯ್ಡಾದ ಸೆಕ್ಟರ್ -39 ಪ್ರದೇಶದಲ್ಲಿ ವಾಸಿಸುತ್ತಿರುವ ವೃದ್ಧ ಪೇಂಟರ್ವೊಬ್ಬ ತನ್ನ ಅಪ್ರಾಪ್ತ ಸೇವಕಿಯ ಮೇಲೆ ಕಳೆದ ಏಳು ವರ್ಷಗಳಿಂದ ಈ ರೀತಿಯ ದುಷ್ಕೃತ್ಯ ಎಸಗುತ್ತಿದ್ದನಂತೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅಲಹಾಬಾದ್ (ಪ್ರಯಾಗ್‌ರಾಜ್) ಮೂಲದ ಪೇಂಟರ್ ಮಾರಿಸ್ ರೈಡರ್ (80) ಎಂಬಾತ ಮಹಿಳಾ ಸ್ನೇಹಿತೆಯೊಂದಿಗೆ ಸೆಕ್ಟರ್ 46ರಲ್ಲಿ ವಾಸಿಸುತ್ತಿದ್ದ. ಈತನ ಜೊತೆ 17 ವರ್ಷದ ಬಾಲಕಿಯೂ ವಾಸಿಸುತ್ತಿದ್ದಳು. ಈ ಬಾಲಕಿ ಕಳೆದ 10 ವರ್ಷದಿಂದಲೂ ಈತನ ಮನೆಯಲ್ಲೇ ನೆಲೆಸಿದ್ದು, ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆದರೆ, ಬಾಲಕಿ ಯೌವ್ವನಕ್ಕೆ ತಿರುಗುತ್ತಿದ್ದಂತೆ ಆರೋಪಿ ಮೌರಿಸ್ ರೈಡರ್ ಕೆಂಗಣ್ಣು ಆಕೆಯ ಮೇಲೆ ಬಿದ್ದಿದೆ.
ಇತ್ತೀಚೆಗೆ ಕಾಟ ಜಾಸ್ತಿಯಾಗಿದೆ. ಆರೋಪಿಯು ತನ್ನ ಬೆರಳು, ಹೆಬ್ಬೆರಳು ಅಥವಾ ಕಾಲ್ಬೆರಳುಗಳನ್ನು ಬಾಲಕಿಯ ದೇಹದ ಖಾಸಗಿ ಭಾಗಗಳಿಗೆ ಬಳಸುತ್ತಿದ್ದ. ಈ ರೀತಿಯ ಕುಚೇಷ್ಟೆಗೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಆತ ವಿಕೃತಿ ಮುಂದುವರಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಸಾಕ್ಷ್ಯ ಸಮೇತ ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 376, 323, 506 ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಜೈಲಿಗೆ ಕಳುಹಿಸುದ್ದೇವೆ ಎಂದು ಹೆಚ್ಚುವರಿ ಡಿಸಿಪಿ ತಿಳಿಸಿದರು.
ಇದನ್ನೂ ಓದಿ: ತಾನೇ ಮುಂದೆ ನಿಂತು ಮಗಳ ಮೇಲೆ ಅತ್ಯಾಚಾರ ಮಾಡಿಸಿದ ತಾಯಿ: ಕೊನೆಗೆ ಮಗುವಿಗೆ ಜನ್ಮ ನೀಡಿದ ಮಗಳು..!
ಇಷ್ಟಕ್ಕೂ ಏನಿದು ಡಿಜಿಟಲ್ ರೇಪ್? ಡಿಜಿಟಲ್ ಅತ್ಯಾಚಾರಕ್ಕೂ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೂ ಯಾವುದೇ ಸಂಬಂಧವಿಲ್ಲ. ಡಿಜಿಟಲ್ ರೇಪ್ ಎಂದರೆ ಯಾವುದೇ ಹುಡುಗಿ ಅಥವಾ ಹುಡುಗ ಇಂಟರ್ನೆಟ್ ಮೂಲಕ ಶೋಷಣೆಗೆ ಒಳಗಾಗಬೇಕು ಎಂದೂ ಇಲ್ಲ. ಆದರೆ ಇದು 'ಡಿಜಿಟಲ್' ಮತ್ತು 'ರೇಪ್' ಎಂಬೆರಡು ಪದಗಳಿಂದ ಮಾಡಲ್ಪಟ್ಟಿದೆ. ಇಂಗ್ಲಿಷ್‌ನಲ್ಲಿ ಡಿಜಿಟ್ ಎಂದರೆ ಸಂಖ್ಯೆ ಎಂದರ್ಥ. ಇಂಗ್ಲಿಷ್ ನಿಘಂಟಿನ ಪ್ರಕಾರ, ದೇಹದ ಕೆಲವು ಭಾಗಗಳನ್ನು ಸಂಖ್ಯೆಗಳಿಂದ ಗುರುತಿಸುತ್ತೇವೆ. ಉದಾಹರಣೆಗೆ ಬೆರಳು, ಹೆಬ್ಬೆರಳು, ಕೈಬೆರಳು ಅಥವಾ ಕಾಲ್ಬೆರಳು ಸೇರಿದಂತೆ ದೇಹದ ಅಂಗಗಳನ್ನು ಎಣಿಸುವುದು, ಗುರುತಿಸುವುದನ್ನು ಮಾಡುತ್ತೇವೆ. ಈ ಕೈಬೆರಳು ಮತ್ತು ಕಾಲ್ಬೆರಳುಗಳಿಂದ ಹೆಣ್ಮಕ್ಕಳ ಖಾಸಗಿ ಸ್ಥಳಗಳನ್ನು ಸ್ಪರ್ಶಿಸುವುದಕ್ಕೆ ಡಿಜಿಟಲ್ ರೇಪ್ ಎನ್ನುವರು.
ನಿದರ್ಶನ, ಅಭಿಯಾನ: ಡಿಜಿಟಲ್ ರೇಪ್ ಬಗ್ಗೆ ಕಳೆದ ಐದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. 2016ರಲ್ಲಿ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಾಗ ಶಾಲಾ ಬಸ್ ಕಂಡಕ್ಟರ್ ಎಲ್ಕೆಜಿ ಓದುತ್ತಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಇಂಥದ್ದೊಂದು ಘಟನೆ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಬಾಲಕಿಯೊಂದಿಗೆ ಈ ಹೇಯ ಕೃತ್ಯ ನಡೆದಿರುವುದು ತಿಳಿದ ಆಕೆಯ ಪೋಷಕರು ಆಕ್ರೋಶಗೊಂಡು ನ್ಯಾಯಕ್ಕಾಗಿ ಪ್ರತಿಭಟಿಸಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಆ ಸಮಯದಲ್ಲಿ ಅಭಿಯಾನಗಳೂ ನಡೆದವು. ಬಳಿಕ ಆರೋಪಿಗೆ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅಂದಿನಿಂದ, ಪ್ಲೇ ಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮುಗ್ದ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಲು ಹಲವು ರೀತಿಯ ಅಭಿಯಾನಗಳು ನಡೆಯುತ್ತಿದೆ. ಅದರ ಭಾಗವಾಗಿ ಡಿಜಿಟಲ್ ರೇಪ್ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.