ಮುಂಬೈ: ಮಹಾರಾಷ್ಟ್ರಕ್ಕೆ ಕೋವಿಡ್ ಲಸಿಕೆಯ 25 ರಿಂದ 30 ಲಕ್ಷ ವಯಲ್ಸ್ (ಬಾಟಲಿಗಳು) ಪೂರೈಕೆಯಾಗದಿದ್ದರೆ ಮೇ 1ರಿಂದ 18-44 ವಯೋಮಾನದ ಜನರಿಗೆ ವ್ಯಾಕ್ಸಿನೇಷನ್ ಆರಂಭಿಸುವುದಿಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ಹೇಳಿದ್ದಾರೆ.
ನಾಳೆಯಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಕೋವಿನ್ ಅಪ್ಲಿಕೇಶನ್‌ನಲ್ಲಿ ನೋಂದಣಿ ಮುಕ್ತವಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ತೋಪೆ, ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು ಕನಿಷ್ಠ ಐದು ದಿನಗಳವರೆಗೆ ಸಾಕಾಗುವಷ್ಟು ಲಸಿಕೆ ಸಂಗ್ರಹವಿರಬೇಕು. ರಾಜ್ಯಕ್ಕೆ 25 ಲಕ್ಷದಿಂದ 30 ಲಕ್ಷ ವೈಯಲ್ಸ್ ಸಿಗದಿದ್ದರೆ 18-44 ವಯೋಮಾನದವರಿಗಾಗಿ ವ್ಯಾಕ್ಸಿನೇಷನ್ ಪ್ರಾರಂಭಿಸುವುದಿಲ್ಲ. ಸಮರ್ಪಕ ಲಸಿಕೆಗಳನ್ನು ನೀಡಿದರೆ ಪ್ರತಿದಿನ ಎಂಟು ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಸಾಮರ್ಥ್ಯ ಮಹಾರಾಷ್ಟ್ರಕ್ಕಿದೆ ಎಂದರು.
ಇದನ್ನೂ ಓದಿ: 24 ಗಂಟೆಗಳಲ್ಲಿ ದೇಶದಲ್ಲಿ 3.86 ಲಕ್ಷ ಸೋಂಕಿತರು ಪತ್ತೆ, 3,498 ಮಂದಿ ಸಾವು
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯ ಕೊರತೆಯ ಬಗ್ಗೆ ತಿಳಿಸಿರುವ ಅವರು, ಡೋಸ್ಗಳ ಕೊರತೆಯಿಂದಾಗಿ ನಾವು ಅನೇಕ ಸಂದರ್ಭಗಳಲ್ಲಿ ವ್ಯಾಕ್ಸಿನೇಷನ್ ಅನ್ನು ಸ್ಥಗಿತಗೊಳಿಸಬೇಕಾಯಿತು. ಲಸಿಕೆ ಖರೀದಿಯ ಮೊತ್ತವನ್ನು ಕೇವಲ ಒಂದು ಚೆಕ್ ಮೂಲಕ ಪಾವತಿಸಲು ಸಿದ್ಧರಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಮಗೆ ( ರಾಜ್ಯ ಸಂಪುಟ) ಮತ್ತು ಲಸಿಕೆ ತಯಾರಕರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಸುಗಮವಾಗಿ ಮತ್ತು ನಿರಂತರವಾಗಿ ಲಸಿಕೆ ಪೂರೈಸುವ ಭರವಸೆಯೊಂದೇ ಅವರಿಗೆ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.