ಇಸ್ಲಾಮಾಬಾದ್(ಪಾಕಿಸ್ತಾನ): ಯಾವುದೇ ಸೂಪರ್ ಪವರ್ ರಾಷ್ಟ್ರ ಭಾರತದ ವಿರುದ್ಧ ಮಾತನಾಡುವುದಿಲ್ಲ. ಭಾರತದ ವಿದೇಶಾಂಗ ನೀತಿಗಳು ಅಷ್ಟೊಂದು ಬಲಿಷ್ಟವಾಗಿವೆ ಎಂದು ಇಮ್ರಾನ್ ಖಾನ್ ಭಾರತವನ್ನು ಹಾಡಿ ಹೊಗಳಿದ್ದಾರೆ. ಕೆಲವು ವಾರಗಳಿಂದ ಪಾಕಿಸ್ತಾನದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಇಮ್ರಾನ್ ಕುರ್ಚಿಗೆ ಕಂಟಕ ಎದುರಾಗಿದೆ. ಈ ಬೆನ್ನಲ್ಲೇ ಅವಿಶ್ವಾಸ ನಿರ್ಣಯ ಮಂಡಿಸಲೇಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ರೀತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಯಾವುದೇ ದೇಶದ ಪರ ನಿರ್ಣಯ ತೆಗೆದುಕೊಳ್ಳಲು ಭಾರತ ನಿರಾಕರಿಸಿದ್ದು, ಈ ವೇಳೆ ಯಾವ ದೇಶವೂ ಭಾರತದ ವಿರುದ್ಧ ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಯೂರೋಪಿಯನ್ ಯೂನಿಯನ್ನ ರಾಜತಾಂತ್ರಿಕ ಅಧಿಕಾರಿಗಳು ಪಾಕಿಸ್ತಾನವನ್ನು ರಷ್ಯಾದ ವಿರುದ್ಧ ಮಾತನಾಡಬೇಕು ಎಂದು ಒತ್ತಡ ಹೇರುತ್ತಲೇ ಇದ್ದರು. ಆದರೆ ಭಾರತವನ್ನು ಒತ್ತಾಯಿಸುವ ಧೈರ್ಯ ಆ ಅಧಿಕಾರಿಗಳಿಗೆ ಇರಲಿಲ್ಲ ಎಂದು ನಮ್ಮ ವಿದೇಶಾಂಗ ನೀತಿಯೂ ಭಾರತೀಯ ವಿದೇಶಾಂಗ ನೀತಿಯಂತೆ ಸಾರ್ವಭೌಮವಾಗಿರಬೇಕು, ಭಾರತವನ್ನು ನೋಡಿ ಪಾಕಿಸ್ತಾನ ಸ್ವಾಭಿಮಾನವನ್ನು ಕಲಿಯಬೇಕು ಎಂದು ಇಮ್ರಾನ್ ಹೇಳಿದ್ದಾರೆ.
ಭಾರತೀಯರನ್ನು 'ಖುದ್ದರ್ ಕ್ವಾಮ್' ಎಂದು ಇಮ್ರಾನ್ ಖಾನ್ ಬಣ್ಣಿಸಿದ್ದಾರೆ. ಖುದ್ದರ್ ಕ್ವಾಮ್ ಎಂದರೆ 'ಬಹಳ ಸ್ವಾಭಿಮಾನಿಗಳು' ಎಂಬ ಅರ್ಥವಿದ್ದು, ಯಾವುದೇ ಸೂಪರ್ಪವರ್ ಭಾರತಕ್ಕೆ ಷರತ್ತುಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ಅವಿಶ್ವಾಸ ನಿರ್ಣಯವನ್ನು ಮಂಡಿಸಬೇಕೆಂದು ತೀರ್ಪು ನೀಡಿದ್ದು, ಆ ತೀರ್ಪಿನಿಂದ ನಾನು ನಿರಾಸೆಗೊಂಡಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಇಂದು ಅವಿಶ್ವಾಸ ನಿರ್ಣಯದ ಮತದಾನ: ನ್ಯಾಷನಲ್ ಅಸೆಂಬ್ಲಿಯಲ್ಲಿ ಇಮ್ರಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಡೆಪ್ಯುಟಿ ಸ್ಪೀಕರ್ ಖಾಸಿಂ ಸೂರಿ ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸುಪ್ರೀಂಕೋರ್ಟ್ಗೆ ಮೊರೆಹೋಗಿದ್ದು, ಇಂದು ಬೆಳಗ್ಗೆ 10:30ರ ನಂತರ ಅವಿಶ್ವಾಸ ನಿರ್ಣಯದ ಮತದಾನ ನಡೆಸಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದರ ಜೊತೆಗೆ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಮತ ಚಲಾವಣೆ ಮುಗಿಯುವವರೆಗೆ ಮುಂದೂಡಬಾರದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಅವಿಶ್ವಾಸ ನಿರ್ಣಯದ ಮತದಾನವನ್ನು ಇಮ್ರಾನ್ ಖಾನ್ ಎದುರಿಸಲಿದ್ದು, ಪಾಕ್ ರಾಜಕೀಯದಲ್ಲಿ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಚೋಪ್ರಾ ಕರೆ