ನವದೆಹಲಿ : ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಸಾವಿನ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆಯೇ ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಕೃಷಿ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಹಾಗಾಗಿ, ಪರಿಹಾರದ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
2020ರ ನವೆಂಬರ್‌ನಿಂದ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿಗಳಲ್ಲಿ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ಧರಣಿ ನಿರತ ಸ್ಥಳದಲ್ಲಿ ಹವಾಮಾನ ವೈಪರೀತ್ಯ, ಅನೈರ್ಮಲ್ಯ ಪರಿಸ್ಥಿತಿ, ಅನಾರೋಗ್ಯದಿಂದ ಹಲವು ರೈತರು ಮೃತಪಟ್ಟರೆ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರ ಮೇಲೆ ಆಡಳಿತ ಅಥವಾ ನಾಗರಿಕರಿಂದ ನಡೆಯುತ್ತಿರುವ ಹಲ್ಲೆಗಳ ಕುರಿತು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ರೈತರ ಪ್ರತಿಭಟನೆಗಳ ಮೇಲಿನ ದಾಳಿಯಿಂದ ರೈತರಿಗೆ ಹಾನಿಯಾದ ಯಾವುದೇ ಪ್ರಕರಣಗಳು ಪ್ರತ್ಯೇಕವಾಗಿ ವರದಿಯಾಗಿಲ್ಲ ಎಂದು ಹೇಳಿದರು.
ಇದರ ನಡುವೆ ತಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ತಿಳಿಸಿದೆ. ಬಾಕಿ ಉಳಿದಿರುವ ಎಲ್ಲಾ ಸಮಸ್ಯೆಗಳನ್ನು ರೈತ ಮುಖಂಡರೊಂದಿಗೆ ಚರ್ಚಿಸುವುದಾಗಿ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: 12 ಸಂಸದರ ಅಮಾನತು ವಾಪಸ್‌ಗೆ ಪಟ್ಟು ; ಸದನದ ಒಳಗೂ, ಹೊರಗೂ ಪ್ರತಿಪಕ್ಷಗಳ ಪ್ರತಿಭಟನೆ