ನವದೆಹಲಿ: ಮುಜಫರ್ ನಗರದಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ಗೆ ಕಾಂಗ್ರೆಸ್ ಬೇಷರತ್ ಬೆಂಬಲ ಸೂಚಿಸಿದೆ. ಈ ವೇಳೆ, ಅವರು ಉತ್ತರಪ್ರದೇಶದಲ್ಲಿ ಆಡಳಿತ ಪಕ್ಷದ ವಿರುದ್ಧ ಪ್ರಚಾರ ಮಾಡುವ ಯೋಜನೆಯನ್ನೂ ಘೋಷಿಸಿದರು.
ಈ ಕುರಿತು ಮಾತನಾಡಿರುವ ಹರಿಯಾಣದ ಎಐಸಿಸಿ ಉಸ್ತುವಾರಿ ವಿವೇಕ್ ಬನ್ಸಾಲ್, ಕೇಂದ್ರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಲು ಅನ್ನದಾತರು ಪ್ರಜಾಪ್ರಭುತ್ವದ ಹಕ್ಕನ್ನು ಬಳಸುತ್ತಿದ್ದಾರೆ. ಇದರು ರಾಜಕೀಯವಲ್ಲ ಎಂದರು.
ಹೊಸ ಕೃಷಿ ಕಾನೂನುಗಳ ಬಗ್ಗೆ ಮೊದಲಿನಿಂದಲೂ ರೈತರು, ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹರಿಯಾಣದಲ್ಲಿ ಅವರು ಬಿಜೆಪಿಗೆ ಸಭೆ ನಡೆಸಲು ಅವಕಾಶ ನೀಡಲಿಲ್ಲ. ಇದು ಖಂಡಿತ ರಾಜಕೀಯವಲ್ಲ ಎಂದು ಹೇಳಿದರು.
ಬೇಡಿಕೆ ಈಡೇರುವವರೆಗೂ ಕೇಂದ್ರದ ವಿರುದ್ಧ ನಡೆಯುತ್ತಿರುವ ಅನ್ನದಾತರ ಹೋರಾಟ ನಿಲ್ಲುವುದಿಲ್ಲ. ಕಾಂಗ್ರೆಸ್ ಯಾವಾಗಲೂ ರೈತರಿಗೆ ಬೆಂಬಲ ನೀಡುತ್ತಿದೆ. ಈ ಮಸೂದೆಗಳನ್ನು ಅಂಗೀಕರಿಸುವ ಮುನ್ನ ಕೇಂದ್ರವು ರೈತರ ಜತೆ ಚರ್ಚಿಸಬೇಕಿತ್ತಲ್ಲವೇ? ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಅವರು ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಬನ್ಸಾಲ್ ಆರೋಪಿಸಿದ್ದಾರೆ.
ಇದನ್ನೂ ಓದಿ: ವಶಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹ.. ರೈತರ ಪ್ರತಿಭಟನೆ
ಸಂಸತ್ತಿನಲ್ಲಿ ಶಾಸನಗಳನ್ನು ಅಂಗೀಕರಿಸಿದ ಬಳಿಕ ಕೇಂದ್ರ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುವುದರ ಅರ್ಥವೇನು? ಈ ಕಾಯ್ದೆಗಳಿಂದ ರೈತರ ಮೇಲೆ ಬೀರುವ ಪರಿಣಾಮವನ್ನು ಕೇಂದ್ರ ಸರ್ಕಾರ ಮೊದಲೇ ಆಲೋಚಿಸಬೇಕಿತ್ತು. ರೈತರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ರೈತರ ಬೇಡಿಕೆಗಳು ಸರಿಯಾಗಿದ್ದು, ಕೇಂದ್ರ ಸರ್ಕಾರ ಈ ಹೊಸ ಕಾನೂನುಗಳನ್ನು ಹಿಂಪಡೆಯಬೇಕು. ಮುಂದಿನ ಕ್ರಮವನ್ನು ರೈತರು ನಿರ್ಧರಿಸುತ್ತಾರೆ ಎಂದರು.