ನವದೆಹಲಿ: ಕಳೆದ 10 ವರ್ಷಗಳಿಂದ ಸ್ವಿಸ್ ಬ್ಯಾಂಕಿನಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ಬಗ್ಗೆ ಸರ್ಕಾರಕ್ಕೆ ಅಧಿಕೃತ ಅಂದಾಜು ಇಲ್ಲ ಎಂದು ಹಣಕಾಸು ಸಚಿವ ಪಂಕಜ್ ಚೌಧರಿ ಸೋಮವಾರ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ 107ಕ್ಕೂ ಹೆಚ್ಚು ಪ್ರಾಸಿಕ್ಯೂಷನ್ ದೂರುಗಳನ್ನು ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸ್ವತ್ತುಗಳು) ಮತ್ತು ತೆರಿಗೆ ವಿಧಿಸುವ ಕಾಯ್ದೆ 2015ರ ಅಡಿ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಕಾಂಗ್ರೆಸ್ ಸಂಸದ ವಿನ್ಸೆಂಟ್ ಪಾಲಾ ಅವರ ಪ್ರಶ್ನೆಗೆ ಹಣಕಾಸು ಸಚಿವರು ಪ್ರತಿಕ್ರಿಯಿಸುತ್ತಿದ್ದರು.
"ವ್ಯವಸ್ಥಿತ ಕ್ರಮಗಳ ಪರಿಣಾಮವಾಗಿ, ಮೇ 31ರಂದು ಕಪ್ಪು ಹಣ ಕಾಯ್ದೆ 2015 ರ ಸೆಕ್ಷನ್ 10 (3) / 10 (4)ರ ಅಡಿ ಮೌಲ್ಯಮಾಪನ ಆದೇಶಗಳನ್ನು 166 ಪ್ರಕರಣಗಳಲ್ಲಿ ಅಂಗೀಕರಿಸಲಾಗಿದ್ದು, ಇದರಲ್ಲಿ 8216 ಕೋಟಿ ರೂ. ಬಹಿರಂಗಪಡಿಸದ ಆದಾಯವನ್ನು 8,465 ಕೋಟಿ ರೂ. (ಅಂದಾಜು) ತೆರಿಗೆಗೆ ತರಲಾಗಿದೆ. ಎಚ್‌ಎಸ್‌ಬಿಸಿ ಪ್ರಕರಣಗಳಲ್ಲಿ 1294 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ. ಐಸಿಐಜೆ (ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್) ನಲ್ಲಿ 11,010 ಕೋಟಿ ರೂ. (ಅಂದಾಜು) ಬಹಿರಂಗಪಡಿಸದ ಆದಾಯ ಪತ್ತೆಯಾಗಿದೆ" ಎಂದು ಉತ್ತರಿಸಿದರು.
"ಪನಾಮ ಪೇಪರ್ಸ್ ಸೋರಿಕೆ ಪ್ರಕರಣಗಳಲ್ಲಿ, ಬಹಿರಂಗಪಡಿಸದ 20,078 ಕೋಟಿ ರೂ. (ಅಂದಾಜು) ಸಾಲಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಪ್ಯಾರಡೈಸ್ ಪೇಪರ್ಸ್ ಸೋರಿಕೆ ಪ್ರಕರಣಗಳಲ್ಲಿ 246 ಕೋಟಿ ರೂ. (ಅಂದಾಜು) ಬಹಿರಂಗಪಡಿಸದ ಸಾಲಗಳನ್ನು ಕಂಡು ಹಿಡಿಯಲಾಗಿದೆ" ಎಂದು ಹೇಳಿದ್ದಾರೆ.