ನವದೆಹಲಿ: ತನ್ನ ಲಿವ್ ಇನ್ ಸಂಗಾತಿಯನ್ನು ಭೀಭತ್ಸವಾಗಿ ಕೊಲೆ ಮಾಡಿದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಮೇಲೆ ಇಂದು ನಾರ್ಕೊ ಅನಾಲಿಸಿಸ್ ಟೆಸ್ಟ್ ನಡೆಸಲಾಗಿಲ್ಲ ಎಂದು ಫೊರೆನ್ಸಿಕ್ ಸೈನ್ಸ್ ಲ್ಯಾಬೊರೆಟರಿ (ಎಫ್‌ಎಸ್‌ಎಲ್) ತಿಳಿಸಿದೆ. ನಾರ್ಕೊ ಟೆಸ್ಟ್ಗಿಂತ ಮುಂಚೆ ಪಾಲಿಗ್ರಾಫ್ ಟೆಸ್ಟ್ ಮಾಡಬೇಕಾಗುತ್ತದೆ. ಮತ್ತು ಈ ಟೆಸ್ಟ್ ಮಾಡಲು ಆತನ ಒಪ್ಪಿಗೆ ಬೇಕಾಗುತ್ತದೆ ಎಂಬುದನ್ನು ಪೊಲೀಸರಿಗೆ ತಿಳಿಸಲಾಗಿದೆ ಎಂದು ಎಫ್‌ಎಸ್‌ಎಲ್ ಹೇಳಿದೆ.
ನಾವು ಇಂದು ಅಫ್ತಾಬ್‌ಗೆ ನಾರ್ಕೋ ಪರೀಕ್ಷೆ ನಡೆಸುತ್ತಿಲ್ಲ ಎಂದು ಎಫ್‌ಎಸ್‌ಎಲ್ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಒಪ್ಪಿಗೆ ಸಿಕ್ಕರೆ ಪಾಲಿಗ್ರಾಫಿಕ್ ಪರೀಕ್ಷೆ ನಡೆಸಲಾಗುವುದು ಎಂದು ಎಫ್‌ಎಸ್‌ಎಲ್‌ನ ಸಹಾಯಕ ನಿರ್ದೇಶಕ ಪುನಿತ್ ಪುರಿ ಹೇಳಿದ್ದಾರೆ. 10 ದಿನಗಳಲ್ಲಿ ನಾರ್ಕೋ ಮಾಡಲಾಗುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ನಾರ್ಕೋ ಪರೀಕ್ಷೆಗಾಗಿ ಮನವಿ ಬಂದಿದೆ ಮತ್ತು ನಾವು ನಮ್ಮ ಕೆಲಸವನ್ನು ಪ್ರಾರಂಭಿಸಿದ್ದೇವೆ. ನಮ್ಮ ನಿರ್ದೇಶಕಿ ದೀಪಾ ವರ್ಮಾ ಅವರು ಈ ಪ್ರಕರಣವನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಎಫ್‌ಎಸ್‌ಎಲ್ ಸಹಾಯಕ ನಿರ್ದೇಶಕ ಸಂಜೀವ್ ಗುಪ್ತಾ ತಿಳಿಸಿದರು.
ಎಫ್‌ಎಸ್‌ಎಲ್ ಮತ್ತು ಪೊಲೀಸ್ ತಂಡದ ನಡುವೆ ಭಾನುವಾರ ಸಭೆ ನಡೆದಿತ್ತು ಮತ್ತು ಎಲ್ಲವನ್ನೂ ನಿರ್ಧರಿಸಲಾಗಿದೆ. ಆದರೆ, ನಾರ್ಕೋ ಪರೀಕ್ಷೆಗೆ ಮುನ್ನ ಕೆಲ ನಿಯತಾಂಕಗಳನ್ನು ಪೂರ್ಣಗೊಳಿಸಬೇಕಾಗಿದೆ ಮತ್ತು ಇದನ್ನು ಪೊಲೀಸರಿಗೆ ತಿಳಿಸಲಾಗಿದೆ. ಅವರು ಪೂರ್ಣಗೊಳಿಸಿದ ತಕ್ಷಣ ನಾವು ನಾರ್ಕೋ ಮಾಡಬಹುದು ಎಂದು ಅವರು ಹೇಳಿದರು.
ನಾರ್ಕೊ ಟೆಸ್ಟ್ ಎಂಬುದು ಸುದೀರ್ಘ ಪ್ರಕ್ರಿಯೆಯಾಗಿದೆ. ಇದನ್ನು ಆಪರೇಷನ್ ಥಿಯೇಟರ್ನಲ್ಲಿ ಮಾಡುವುದರಿಂದ ಇದರಲ್ಲಿ ವೈದ್ಯರು ಸೇರಿದಂತೆ ಇನ್ನೂ ಕೆಲ ವೈದ್ಯಕೀಯ ವಿಚಾರಗಳು ಅಡಕವಾಗಿರುತ್ತವೆ. ಎಫ್‌ಎಸ್‌ಎಲ್‌ನ ಪರಿಣಿತರು, ಫೋಟೊ ವಿಭಾಗದವರು, ನಾರ್ಕೊ ಪರಿಣಿತರು ಈ ಎಲ್ಲರ ತಂಡಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಎಫ್‌ಎಸ್‌ಎಲ್ ಕ್ರೈಮ್ ಸೀನ್ ಇನ್ಚಾರ್ಜ್ ರಜನೀಶ್ ಗುಪ್ತಾ ಮಾಹಿತಿ ನೀಡಿದರು.
ಇದನ್ನೂ ಓದಿ: ಶ್ರದ್ಧಾಳನ್ನು ಕೊಂದು ಮುಖ ಸುಟ್ಟು ವಿರೂಪಗೊಳಿಸಿದ್ದ ಪಾತಕಿ ಅಫ್ತಾಬ್!