ನವದೆಹಲಿ: ದೇಶದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇನ್ಮುಂದೆ ಹೊಸದಾಗಿ ಮದ್ಯದಂಗಡಿ ಓಪನ್ ಮಾಡಿ ಮದ್ಯ ಮಾರಾಟ ಮಾಡಲು ಪರವಾನಿಗಿ ನೀಡದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಇದು ಅನ್ವಯವಾಗಲಿದೆ. ಹೆದ್ದಾರಿಗಳಿಂದ 500 ಮೀಟರ್ ಅಂತರದೊಳಗೆ ಯಾವುದೇ ರೀತಿಯ ಮದ್ಯದಂಗಡಿಗಳು ಇರುವಂತಿಲ್ಲ ಎಂದಿದೆ. ಇದರ ಜತೆಗೆ 20 ಸಾವಿರಕ್ಕಿಂತಲೂ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ಹೆದ್ದಾರಿ ಅಕ್ಕಪಕ್ಕದ 220 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಮದ್ಯ ಮಾರಾಟ (ಹೊಸದಾಗಿ) ಮಾಡುವಂತಿಲ್ಲ ಎಂದು ತಿಳಿಸಿದೆ.
ಮಹತ್ವದ ಆದೇಶ ಹೊರಬಿದ್ದಿರುವ ಕಾರಣ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದು, ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಇನ್ಮುಂದೆ ಹೊಸದಾಗಿ ಮದ್ಯದ ಅಂಗಡಿ ಓಪನ್ ಮಾಡಲು ಲೈಸನ್ಸ್ ಪಡೆದುಕೊಳ್ಳುವಾಗ ಆಯಾ ರಾಜ್ಯಗಳು ಸುಪ್ರೀಂಕೋರ್ಟ್ ಸೂಚನೆ ಪಾಲನೆ ಮಾಡುವಂತೆ ತಿಳಿಸಿದೆ. ಜತೆಗೆ 500ಮೀಟರ್ಯೊಳಗೆ ಎಷ್ಟು ಮದ್ಯದಂಗಡಿಗಳಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ. 2016ರ ಡಿಸೆಂಬರ್ನಲ್ಲಿ ಅಪೆಕ್ಸ್ ಕೋರ್ಟ್ ಈ ರೀತಿಯ ಆದೇಶ ಹೊರಹಾಕಿತ್ತು. ಇದೀಗ ಅದೇ ತೀರ್ಪನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಕುಡಿದು ವಾಹನ ಚಲಾವಣೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.