ನವದೆಹಲಿ: 2021ರ ಹಜ್ ಯಾತ್ರೆ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಕೋವಿಡ್ -19 ಗೆ ಸಂಬಂಧಪಟ್ಟಂತೆ ವಾರ್ಷಿಕ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಭಾರತ ಬದ್ಧವಾಗಿರುವುದಾಗಿಯೂ ಅವರು ಹೇಳಿದರು.
"ಹಜ್ ಯಾತ್ರೆ ಸೌದಿ ಅರೇಬಿಯಾ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ. ಭಾರತ ತನ್ನ ನಿರ್ಧಾರದಲ್ಲಿ ಸೌದಿ ಸರ್ಕಾರದ ಪರವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ ವರ್ಷ ಹಜ್ ರದ್ದಾಯಿತು, ಈ ವರ್ಷ ಇನ್ನೂ ಏನನ್ನೂ ನಿರ್ಧರಿಸಲಾಗಿಲ್ಲ" ಎಂದು ನಖ್ವಿ ಹೇಳಿದರು .
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಇರುವ ಸೀಮಿತ ಜನರು ಮಾತ್ರ ಹಜ್ ಕರ್ಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈ ವರ್ಷ ಸೌದಿ ಅರೇಬಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದರೂ, ಹಜ್ ಯಾತ್ರೆಯ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
"ಭಾರತವು ಸೌದಿ ಅರೇಬಿಯಾದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದೆ. ಕೋವಿಡ್ ಸಮಯದಲ್ಲಿ ಸೌದಿ ನಮಗೆ ಬಹಳ ಸಹಾಯ ಮಾಡಿದೆ. ಅದೇ ರೀತಿ ಭಾರತವೂ ಸೌದಿ ಅರೇಬಿಯಾ ಸೇರಿದಂತೆ ಹಲವಾರು ದೇಶಗಳಿಗೆ ಸಹಾಯ ಮಾಡಿದೆ. ಆದ್ದರಿಂದ, ಸೌದಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ನಾವು ಗೌರವಿಸುತ್ತೇವೆ" ಎಂದು ಸಚಿವರು ಹೇಳಿದರು.
ಪ್ರತಿ ವರ್ಷ ಎರಡು ಮಿಲಿಯನ್ಗಿಂತಲೂ ಹೆಚ್ಚು ಮುಸ್ಲಿಮರು ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾದಲ್ಲಿ ಹಜ್ ಕರ್ಮದಲ್ಲಿ ಪಾಲ್ಗೊಳ್ಳುತ್ತಾರೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಜನರು ಹಜ್ ಯಾತ್ರೆ ತೆರಳುತ್ತಾರೆ. 2019 ರಲ್ಲಿ 2 ಲಕ್ಷ ಭಾರತೀಯರು ಹಜ್ ಯಾತ್ರೆ ಕೈಗೊಂಡಿದ್ದರು.
ಇದನ್ನೂ ಓದಿ: ದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಅತಿ ಕಡಿಮೆ ಸೋಂಕು ಪ್ರಕರಣ ದಾಖಲು