ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರಿಗಳು ವರ್ಗಾವಣೆ ಮತ್ತು ನಿಯೋಜನೆ ವಿವಾದ ಕುರಿತಾಗಿ ನಾಗರಿಕ ಸೇವಾ ಪ್ರಾಧಿಕಾರ ರಚನೆ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ದೆಹಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಸುಗ್ರೀವಾಜ್ಞೆಗೆ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಸಂಸತ್ತಿನಲ್ಲಿ ಈ ವಿವಾದಿತ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಸೇರಿ ಇತರ ಪ್ರತಿಪಕ್ಷಗಳು ಸಹ ವಿರೋಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆದರೆ, ಈ ವರದಿಗಳನ್ನು ಕಾಂಗ್ರೆಸ್ ನಿರಾಕರಿಸಿದೆ. ಜೊತೆಗೆ ಈ ವಿಷಯದ ಬಗ್ಗೆ ಪಕ್ಷ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದೆ.
''ಅಧಿಕಾರಿಗಳ ಮೇಲೆ ಹಿಡಿತ ಮತ್ತು ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಹೊರಡಿಸಿದ ಸುಗ್ರೀವಾಜ್ಞೆಯ ವಿಷಯದ ಬಗ್ಗೆ ಕಾಂಗ್ರೆಸ್ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಬಗ್ಗೆ ಪಕ್ಷವು ರಾಜ್ಯ ಘಟಕ ಮತ್ತು ಇತರ ಸಮಾನ ಮನಸ್ಕ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಿದೆ'' ಎಂದು ಎಐಸಿಸಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ. ಇದೇ ವೇಳೆ, ''ನಮ್ಮ ಪಕ್ಷವು ಕಾನೂನಿನ ನಿಯಮಗಳನ್ನು ನಂಬುತ್ತದೆ. ಇದರೊಂದಿಗೆ ಯಾವುದೇ ರಾಜಕೀಯ ಪಕ್ಷವು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಅನಗತ್ಯ ಘರ್ಷಣೆ, ರಾಜಕೀಯ ಕಿರುಕುಳ, ಸುಳ್ಳು ಪ್ರಚಾರವನ್ನು ಕ್ಷಮಿಸುವುದಿಲ್ಲ'' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ದುರಹಂಕಾರಿ ಎಂದ ಸಿಸೋಡಿಯಾ: ಮಾಜಿ ಡಿಸಿಎಂ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದ್ರಾ ಪೊಲೀಸರು?
ದೆಹಲಿಯಲ್ಲಿ ಚುನಾಯಿತ ಸರ್ಕಾರವೇ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ, ಇದರ ಬೆನ್ನಲ್ಲೆ ನಾಗರಿಕ ಸೇವಾ ಪ್ರಾಧಿಕಾರವನ್ನು ರಚಿಸಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರೀವಾಜ್ಞೆ ಪ್ರಕಾರ, ಈ ಪ್ರಾಧಿಕಾರದ ಅಧ್ಯಕ್ಷರು ದೆಹಲಿ ಮುಖ್ಯಮಂತ್ರಿ ಆಗಿರುತ್ತಾರೆ. ಜೊತೆಗೆ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಗೃಹ ಕಾರ್ಯದರ್ಶಿಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಆದರೆ, ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳಲಾಗಿದೆ.
ಹೀಗಾಗಿ ರಾಷ್ಟ್ರ ರಾಜಧಾನಿಯ ಆಡಳಿತದ ಮೇಲೆ ನಿಯಂತ್ರಣ ವಿಷಯವಾಗಿ 2014ರಿಂದಲೂ ಹೋರಾಟ ಮಾಡುತ್ತಿರುವ ಆಮ್ ಆದ್ಮಿ ಪಕ್ಷವು ಈ ಸುಗ್ರೀವಾಜ್ಞೆಯನ್ನು ಬಲವಾಗಿ ಖಂಡಿಸುತ್ತಿದೆ. ಕೇಂದ್ರವು ಲೆಫ್ಟಿನೆಂಟ್ ಗರ್ವನರ್ ಮೂಲಕ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸುತ್ತಲೇ ಇದ್ದಾರೆ. ಮತ್ತೊಂದೆಡೆ, ಜುಲೈನಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಆಗ ಸುಗ್ರೀವಾಜ್ಞೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರ ಎದುರು ನೋಡುತ್ತಿದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಈ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ರಾಜ್ಯಸಭೆಯಲ್ಲಿ ಈ ವಿವಾದಾತ್ಮಕ ಸುಗ್ರೀವಾಜ್ಞೆಗೆ ಅಂಗೀಕಾರ ಸ್ವಲ್ಪ ಕಷ್ಟವಾಗಲಿದೆ.
ಆದ್ದರಿಂದ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವು ಸಂಸತ್ತಿನಲ್ಲಿ ಈ ಸುಗ್ರೀವಾಜ್ಞೆಗೆ ತಡೆ ಹಾಕಬೇಕು ಎಂಬ ಕಸರತ್ತು ಈಗಿನಿಂದಲೇ ಆರಂಭಿದ್ದಾರೆ. ಈ ವಿಷಯದ ಬಗ್ಗೆ ಇತರ ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ಪ್ರಮುಖ ನಾಯಕರನ್ನು ಭೇಟಿ ಮಾಡಿ ಚರ್ಚೆಯನ್ನೂ ಕೇಜ್ರಿವಾಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ಗೆ ಕೇಂದ್ರ ಅಪಮಾನ ಮಾಡಿದೆ... ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇವೆ: ಕೇಜ್ರಿವಾಲ್