ನವದೆಹಲಿ: ಮಾನಹಾನಿ ಪ್ರಕರಣದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ಬಳಿಕ ರದ್ದಾಗಿದ್ದ ಸಂಸದ ಸ್ಥಾನವನ್ನು ಮರಳಿ ಪಡೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮಂಡನೆಯ ಪರವಾಗಿ ಇಂದು ಮಾತನಾಡಲಿದ್ದಾರೆ.
ಲೋಕಸಭೆಯಲ್ಲಿ ಇಂದು ನಡೆಯುವ 2ನೇ ದಿನದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದು, ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳ ಬಾಣ ಬಿಡಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು, ರಾಹುಲ್ ಗಾಂಧಿ ಇಂದು ಅವಿಶ್ವಾಸದ ಮೇಲೆ ಮಾತನಾಡುತ್ತಾರೆ. ಅವರು ಮಧ್ಯಾಹ್ನ 12 ಗಂಟೆಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಸರ್ಕಾರ ರಾಷ್ಟ್ರ, ಸಮಾಜ, ಮಣಿಪುರದ ಬಗ್ಗೆ ಯೋಚಿಸುವುದಿಲ್ಲ. ಅವರ ಏಕೈಕ ಕೆಲಸವೆಂದರೆ ರಾಹುಲ್ ಗಾಂಧಿ ಮತ್ತು ಅವರ ಕುಟುಂಬವನ್ನು ನಿಂದಿಸುವುದು. ಇದು ಬಿಟ್ಟು ಅವರಿಗೆ ಬೇರೆ ಏನೂ ತಿಳಿದಿಲ್ಲ. ಮೋದಿ ಮತ್ತು ಅವರ ಸರ್ಕಾರ, ಸಹೋದ್ಯೋಗಿಗಳು ರಾಹುಲ್ ಗಾಂಧಿಯ ಬಗ್ಗೆ ಅಷ್ಟೇಕೆ ಹೆದರುತ್ತಾರೆ?. ನನಗೆ ಇದು ತುಂಬಾ ಆಶ್ಚರ್ಯಕರ ಸಂಗತಿಯಾಗಿದೆ ಎಂದು ಹೇಳಿದರು.
ಸಂಸತ್ತಿನ ಕೆಳಮನೆಯಲ್ಲಿ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಸಂಸದ ಗೌರವ್ ಗೊಗೊಯ್ ಮಂಗಳವಾರ ಚರ್ಚೆಯನ್ನು ಆರಂಭಿಸಿದರು. ಮಣಿಪುರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ 'ಮೌನ ವ್ರತ'ವನ್ನು ಮುರಿಯಲು ಸರ್ಕಾರದ ವಿರುದ್ಧ ಈ ನಿರ್ಣಯ ಮಂಡಿಸಲಾಗಿದೆ ಎಂದು ಹೇಳಿದರು.
ಸಮಿತಿ ಏನು ಮಾಡಿದೆ?: ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಶುರು ಮಾಡಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಾತನಾಡಿ, ಕೇಂದ್ರ ಗೃಹ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದು ತಿಳಿದಿದೆ. ಅವರು ಮಾತನಾಡುವ ಮೊದಲು ಅವರಿಗೆ ನಾನೊಂದು ಪ್ರಶ್ನೆ ಕೇಳುವೆ. ಶಾ ಅವರು ಮಣಿಪುರಕ್ಕೆ ಭೇಟಿ ನೀಡಿದಾಗ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಇಲ್ಲಿಯವರೆಗೂ ಏನು ಕೆಲಸ ಮಾಡಿದೆ ಎಂಬುದನ್ನು ತಿಳಿಸಲಿ. ಅಲ್ಲದೇ, ಡಬಲ್ ಎಂಜಿನ್ ಸರ್ಕಾರವೂ ಅಲ್ಲಿ ಏನಾದರೂ ಕೆಲಸ ಮಾಡುತ್ತಿದೆಯೇ ಎಂಬುದನ್ನು ವಿವರಿಸಲಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಇಂದು ಕಾಂಗ್ರೆಸ್ ಸಂಸದೀಯ ಸಭೆ; ಅವಿಶ್ವಾಸ ನಿಲುವಳಿ ಬಗ್ಗೆ ತಂತ್ರಗಾರಿಕೆ?