ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ ರೂಪಾಂತರ ಪತ್ತೆಯಾಗಿದೆ. ಇದರಿಂದ ಅನೇಕ ದೇಶಗಳು ಆತಂಕಕ್ಕೊಳಗಾಗಿವೆ.
ಇದೇ ವಿಚಾರವಾಗಿ ಇದೀಗ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್-19 ಹೊಸ ರೂಪಾಂತರ ಭಾರತದಲ್ಲಿ ಈವರೆಗೆ ಪತ್ತೆಯಾಗಿಲ್ಲ ಎಂದಿದೆ.
ಆಫ್ರಿಕಾದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರ ಪತ್ತೆಯಾಗಿರುವ ಬಗ್ಗೆ ಈಗಾಗಲೇ ಮಾಹಿತಿ ಹಂಚಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶ ಹಾಗೂ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಆಫ್ರಿಕಾ ಹಾಗೂ ಇತರೆ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ : ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ಕೋವಿಡ್ ಅಸಾಮಾನ್ಯ ರೂಪಾಂತರವಾಗಿದೆ. ದೇಹದ ಪ್ರತಿಕಾಯಗಳಿಂದ ತಪ್ಪಿಸಿಕೊಂಡು ಹೆಚ್ಚಾಗಿ ವ್ಯಾಪಿಸುವ ಸಾಮರ್ಥ್ಯ ಹೊಂದಿದೆ. ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದಲ್ಲಿ ಹೆಚ್ಚು ವ್ಯಾಪಕವಾಗಿ ಈ ಸೋಂಕು ಹರಡುತ್ತಿದೆ.
ಇದನ್ನೂ ಓದಿರಿ: ಮುಂಬೈ ದಾಳಿ ಮರೆಯಲು ಅಸಾಧ್ಯ.. ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ : ನಮೋ
ದಕ್ಷಿಣ ಆಫ್ರಿಕಾ, ಹಾಂಕಾಂಗ್, ಬೋಟ್ಸಾವಾನಾಗಳಿಂದ ಬರುವ ಪ್ರವಾಸಿಗರಿಗೆ ಸ್ಕ್ರೀನಿಂಗ್ ಹಾಗೂ ಪರೀಕ್ಷೆಗೊಳಪಡಿಸುವಂತೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.