ನವದೆಹಲಿ : ಆಧಾರ್ ಕಾರ್ಡ್ನ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯ ದತ್ತಾಂಶವನ್ನು ಸಂಗ್ರಹಿಸುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನಿರ್ವಹಿಸುವ ಕೇಂದ್ರೀಯ ಗುರುತಿನ ದತ್ತಾಂಶ ಸಂಗ್ರಹದಿಂದ (ಸಿಐಡಿಆರ್) ಆಧಾರ್ ಕಾರ್ಡ್ ಹೊಂದಿರುವವರ ಡೇಟಾದಲ್ಲಿ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಹಾಗೂ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸರ್ಕಾರ ಶುಕ್ರವಾರ ರಾಜ್ಯ ಸಭೆಯಲ್ಲಿ ತಿಳಿಸಿದೆ. ಬ್ಯಾಂಕ್ ಡೇಟಾಬೇಸ್‌ಗಳಂತಹ ಯಾವುದೇ ಬಾಹ್ಯ ಡೇಟಾಬೇಸ್‌ಗೆ CIDR ಲಿಂಕ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಸಂಖ್ಯೆ ಎಷ್ಟು ಸೋರಿಕೆಯಾಗಿದೆ ಎಂದು ಡಿಎಂಕೆ ಸಂಸದ ಪಿ ವಿಲ್ಸನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರಿಸಿದರು.
ಕೋವಿಡ್ ವ್ಯಾಕ್ಸಿನೇಷನ್ ಡೋಸ್ಗಳನ್ನು ಪಡೆಯಲು ಕೋವಿನ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲಾದ ಲಕ್ಷಾಂತರ ಭಾರತೀಯರ ಖಾಸಗಿ ಮಾಹಿತಿಯು ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ವಿವರಗಳಂತಹ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ತಮ್ಮ ಕೋವಿನ್ ಪೋರ್ಟಲ್ ಅನ್ನು ನವೀಕರಿಸಿದ ವ್ಯಕ್ತಿಗಳ ಪಾಸ್‌ಪೋರ್ಟ್ ವಿವರಗಳು ಸಹ ಸೋರಿಕೆಯಾಗಿವೆ. ಇದರಲ್ಲಿ ಕೆಲವು ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರುಗಳು ಸಹ ಇತ್ತು ಎಂದು ಆರೋಪಿಸಲಾಗಿತ್ತು.
ವರದಿಗಳ ಪ್ರಕಾರ, ಟೆಲಿಗ್ರಾಮ್ ಬೋಟ್ (Telegram bot) ಕಳೆದ ಮೂರು ವರ್ಷಗಳಲ್ಲಿ ಕೋವಿನ್ (CoWIN) ಅಪ್ಲಿಕೇಶನ್ ಬಳಸಿ ಲಸಿಕೆಗಳನ್ನು ತೆಗೆದುಕೊಂಡ ಎಲ್ಲರ ಫೋನ್ ಸಂಖ್ಯೆಗಳು, ಆಧಾರ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಇತರೆ ಪ್ರಮುಖ ವಿವರಗಳನ್ನು ಸೋರಿಕೆ ಮಾಡಿದೆ. ಇದು ಲಕ್ಷಾಂತರ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ದೇಶದ ನೋಡಲ್ ಸೈಬರ್ ಭದ್ರತಾ ಸಂಸ್ಥೆ CERT - In ಗೆ ವಿನಂತಿಸಿತ್ತು.
ಇದನ್ನೂ ಓದಿ : ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲ.. ಸಮಗ್ರ ತನಿಖೆಗೆ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು
ಕೋವಿಡ್ 19 ಸಾಂಕ್ರಾಮಿಕ ವೈರಸ್ ನಿಯಂತ್ರಿಸಲು ಲಸಿಕೆ ನೀಡಿದೆ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರವು ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಕೋವಿಡ್ ಸಂಬಂಧಿತ ಸೇವೆಗಳು ಮತ್ತು ಮಾಹಿತಿಗಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಲು ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯಗೊಳಿಸಲಾಗಿತ್ತು. ಈ ವೇಳೆ ಬಳಕೆದಾರರ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರೆ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ : ತೂಕದಲ್ಲಿ ವಂಚನೆ : ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕ್ಕೆ ಸವದಿ ಆಗ್ರಹ