ನವದೆಹಲಿ: ಫೈಬರ್ ನೆಟ್ ಹಗರಣ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಚಂದ್ರಬಾಬು ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ನವೆಂಬರ್ 9ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ಪೀಠಕ್ಕೆ ಮುಂದೆ ಚಂದ್ರಬಾಬು ನಾಯ್ಡು ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ತಮ್ಮ ಕಕ್ಷಿದಾರರಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದುವರಿಸುವಂತೆ ಮನವಿ ಮಾಡಿದರು. ಆಗ ನ್ಯಾಯಪೀಠ, ನಾಯ್ಡು ಅವರ ಇನ್ನೊಂದು ಮನವಿಯ ಮೇಲಿನ ತೀರ್ಪು ನೀಡುವವರೆಗೆ ಕಾಯಬೇಕೇ ಎಂದು ಕೇಳಿತು.
ಇದನ್ನೂ ಓದಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ: ಆಂಧ್ರ ರಾಜ್ಯಾದ್ಯಂತ ಪ್ರವಾಸಕ್ಕೆ ಪತ್ನಿ ನಿರ್ಧಾರ
ಮತ್ತೊಂದೆಡೆ, ಆಂಧ್ರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು, ಲೂತ್ರಾ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಒಬ್ಬ ವ್ಯಕ್ತಿಯನ್ನು ಒಮ್ಮೆ ಬಂಧನದಲ್ಲಿಟ್ಟರೆ, ಮತ್ತೆ ಬಂಧಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು. ಈ ವೇಳೆ, ಫೈಬರ್ ನೆಟ್ ಹಗರಣ ಪ್ರಕರಣದಲ್ಲಿ ನಾಯ್ಡು ಅವರನ್ನು ಬಂಧಿಸುವ ಅಗತ್ಯವನ್ನು ಪ್ರಶ್ನಿಸಿದ ಪೀಠವು, ನಾಯ್ಡು ಈಗಾಗಲೇ ಬಂಧನದಲ್ಲಿದ್ದು, ಅವರನ್ನು ವಿಚಾರಣೆ ನಡೆಸಬಹುದು ಎಂದು ರಾಜ್ಯದ ವಕೀಲರಿಗೆ ತಿಳಿಸಿತು.
ಈ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, ವಿಚಾರಣೆಯ ಉದ್ದೇಶಕ್ಕಾಗಿ ನ್ಯಾಯಾಲಯದ ಅನುಮತಿ ಬೇಕಾಗುತ್ತದೆ. ನಮ್ಮ ಕಸ್ಟಡಿಯಲ್ಲಿದ್ದಾರೆ ಎಂದು ತೋರಿಸದಿದ್ದರೆ, ಪೊಲೀಸ್ ಕಸ್ಟಡಿ ಕುರಿತು ಅರ್ಜಿ ಸಲ್ಲಿಸಲು ಸಾಧ್ಯವಾಗಲ್ಲ ಎಂದರು. ಈ ವಾದಗಳನ್ನು ವಿರೋಧಿಸಿದ ನಾಯ್ಡು ಪರ ವಕೀಲ ಲೂತ್ರಾ, ಇದು ಸುಳ್ಳು ಮತ್ತು ಇದು ಕಾನೂನಿನ ಸಂಪೂರ್ಣ ತಪ್ಪಾಗಿ ನಿರೂಪಿಸಲಾಗಿದೆ. ಸೆಪ್ಟೆಂಬರ್ 9ರಂದು ನಾಯ್ಡು ಅವರನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಯಾವುದೇ ಪ್ರಶ್ನೆಗಳನ್ನು ಕೇಳುವ ಬಗ್ಗೆ ಚಿಂತಿಲ್ಲ ಎಂದು ಹೇಳಿದರು.
ವಾದ - ಪ್ರತಿವಾದ ಆಲಿಸಿದ ನ್ಯಾಯ ಪೀಠವು, ಕೌಶಲ್ಯಾಭಿವೃದ್ಧಿ ಪ್ರಕರಣದ ತೀರ್ಪನ್ನು ನ್ಯಾಯಾಲಯವು ಈಗಾಗಲೇ ವಿಚಾರಣೆ ಕಾಯ್ದಿರಿಸಿರುವುದರಿಂದ ಈ ಪ್ರಕರಣ ವಿಚಾರಣೆಯನ್ನು ನವೆಂಬರ್ 9 ರವರೆಗೆ ಮುಂದೂಡಲು ನಿರ್ಧರಿಸಿತು. ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿರುವ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ನಾಯ್ಡು ಪ್ರಶ್ನಿಸಿದ್ದಾರೆ. ಜೊತೆಗೆ ಫೈಬರ್ ನೆಟ್ ಹಗರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಹೈಕೋರ್ಟ್ ಆದೇಶದ ವಿರುದ್ಧ ನಾಯ್ಡು ಸಲ್ಲಿಸಿರುವ ವಿಶೇಷ ರಜಾಕಾಲದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದೆ.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ನ್ಯಾಯಾಂಗ ಬಂಧನ ವಿಸ್ತರಣೆ: ಜೈಲಿನಲ್ಲಿ ಭದ್ರತೆ ಬಗ್ಗೆ ಆತಂಕ