ಸೋಹ್ನಾ (ಹರಿಯಾಣ): ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮಾರ್ಗಗಳನ್ನೊಳಗೊಂಡ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ (DME) ಪ್ರಗತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇಂದು ಪರಿಶೀಲಿಸಿದ್ದಾರೆ.
ಹರಿಯಾಣದ ಸೋಹ್ನಾದಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಎಕ್ಸ್‌ಪ್ರೆಸ್‌ವೇಯನ್ನು 98,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆರು ರಾಜ್ಯಗಳ ಮೂಲಕ ಹಾದು ಹೋಗುವ 1,380 ಕಿಲೋ ಮೀಟರ್ ಉದ್ದದ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಬಂಡವಾಳ ಹೂಡಿಕೆ ಚೀನಾದಿಂದ ಭಾರತಕ್ಕೆ ವರ್ಗಾಯಿಸಲು ಅಮೆರಿಕ ಉತ್ಸುಕ: ಸಚಿವ ನಿತಿನ್ ಗಡ್ಕರಿ
ದೆಹಲಿ - ಚಂಡೀಗಢ, ದೆಹಲಿ - ಡೆಹ್ರಾಡೂನ್ ಮತ್ತು ದೆಹಲಿ-ಹರಿದ್ವಾರಕ್ಕೆ ನೀವು ಕೇವಲ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಇನ್ನು ದೆಹಲಿ- ಕತ್ರಾ ಎಕ್ಸ್‌ಪ್ರೆಸ್‌ವೇ ಎರಡು ವರ್ಷಗಳಲ್ಲಿ ಆರಂಭಿಸಲಾಗುವುದು. ಇದು 727 ಕಿ.ಮೀ ದೂರವನ್ನು 572 ಕಿಲೋ ಮೀಟರ್ಗೆ ಕಡಿಮೆ ಮಾಡಲಿದ್ದು, ,ದೆಹಲಿಯಿಂದ ಕತ್ರಾವನ್ನು ನೀವು ಆರು ಗಂಟೆಗಳಲ್ಲಿ ತಲುಪುತ್ತೀರಿ ಎಂದು ಗಡ್ಕರಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ 'ನವ ಭಾರತ' ಯೋಜನೆಯಡಿ ನಿರ್ಮಿಸಲಾಗುತ್ತಿರುವ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಗೆ 2019ರ ಮಾರ್ಚ್ 9 ರಂದು ಶಿಲಾನ್ಯಾಸ ಮಾಡಲಾಗಿತ್ತು. 1,380 ಕಿ.ಮೀನಲ್ಲಿ, 1,200 ಕಿ.ಮೀ ಗುತ್ತಿಗೆಯನ್ನು ಈಗಾಗಲೇ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.