ಮುಂಬೈ: ಎಲ್ಲ ಬ್ಯಾಂಕ್ ಶಾಖೆಗಳು ಸ್ಥಳೀಯವಾಗಿ ಮಾತನಾಡುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಬ್ಯಾಂಕ್ಗಳ ಮುಂಚೂಣಿ ಸಿಬ್ಬಂದಿ ಸ್ಥಳೀಯ ಭಾಷೆ ಅರಿತಿರಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಹಕರಿಗೂ ಹಿಂದಿ ತಿಳಿದಿರುವುದಿಲ್ಲ. ಬ್ಯಾಂಕ್ ಶಾಖೆಯಲ್ಲಿ ಸ್ಥಳೀಯ ಭಾಷೆ ಮಾತನಾಡುವ ಸಿಬ್ಬಂದಿ ಹೊಂದಿದ್ದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಗ್ರಾಹಕರಿಗೆ ನಿಮ್ಮ ಭಾಷೆ ಬಾರದ್ದಕ್ಕೆ ಅವರನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಿದ್ದಾರೆ.
ಮುಂಚೂಣಿ ಸಿಬ್ಬಂದಿ ಸ್ಥಳೀಯರಾಗಿರಲಿ: ನಿರ್ದಿಷ್ಟ ಭಾಷೆ ತಿಳಿದ ಸಿಬ್ಬಂದಿಯನ್ನು ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೊಂದಲು ಸಾಧ್ಯವಿಲ್ಲ. ಆದರೆ, ಬ್ಯಾಂಕ್ನ ಮುಂಚೂಣಿ ಸಿಬ್ಬಂದಿ ಆಯಾ ಸ್ಥಳೀಯ ಭಾಷಿಕರಾದರೆ, ಗ್ರಾಹಕರಿಗೆ ತೊಂದರೆ ಉಂಟಾಗದು. ಇದು ಉತ್ತಮ ವ್ಯವಹಾರಕ್ಕೂ ನೆರವಾಗಲಿದೆ. ಹೀಗಾಗಿ ಅಂತಹ ಸಿಬ್ಬಂದಿಯನ್ನು ಸ್ಥಳೀಯ ಮಟ್ಟದಲ್ಲೇ ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಶಾಖೆಯ ವಿವಿಧ ಹಂತಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಯ ಭಾಷಾ ಜ್ಞಾನ ಮತ್ತು ಪ್ರದೇಶ ಪರಿಶೀಲಿಸಲು ಅವರು ಬ್ಯಾಂಕ್‌ಗಳಿಗೆ ಸಲಹೆ ನೀಡಿ, ಒಂದು ವೇಳೆ ಬ್ಯಾಂಕ್ ಶಾಖೆಗಳು ಸ್ಥಳೀಯ ಸಿಬ್ಬಂದಿ ಹೊಂದಿಲ್ಲದಿದ್ದರೆ, ಗ್ರಾಹಕರು ಸಮಸ್ಯೆ ಅನುಭವಿಸಿದಂತೆ ನೋಡಿಕೊಳ್ಳುವುದು ಆಯಾ ಬ್ಯಾಂಕ್ ಜವಾಬ್ದಾರಿಯಾಗಿದೆ ಎಂದರು.
ದಕ್ಷಿಣ ಭಾರತದ ಹಲವು ಸಾರ್ವಜನಿಕ ವಲಯದ ಬ್ಯಾಂಕ್ ಸಿಬ್ಬಂದಿ, ಗ್ರಾಹಕರನ್ನು ಹಿಂದಿಯಲ್ಲಿ ವ್ಯವಹರಿಸುವಂತೆ ಒತ್ತಾಯಿಸುತ್ತಿರುವ ನಿದರ್ಶನಗಳು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಾನು ಹಿಂದಿ ಕಲಿಯುತ್ತಿರುವೆ, ನೀವೂ ಭಾಷೆ ಕಲಿಯಿರಿ: ಹಿಂದಿ ಭಾಷೆಯಲ್ಲೇ ವ್ಯವಹಾರಕ್ಕೆ ಗ್ರಾಹಕರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಭಾಷೆ ಕಲಿಯಲು ಇರುವ ತೊಂದರೆಯಾದರೂ ಏನು?. ನನ್ನದು ದಕ್ಷಿಣ ಭಾರತದ ಮೂಲ. ನಾನು ಹಿಂದಿಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ಆದರೆ, ನಾನು ಮಾತನಾಡುವಾಗ ತಡವರಿಸುತ್ತೇನೆ. ಹಾಗೆಂದು ಮಾತನಾಡುವುದೇ ಇಲ್ಲ ಎನ್ನುವುದಿಲ್ಲ. ನಾವು ಆಯಾ ಪ್ರದೇಶಕ್ಕನುಗುಣವಾಗಿ ಭಾಷೆ ಕಲಿಯಬೇಕು ಎಂದು ಹೇಳಿದರು.
ನಾನು ಸ್ವಲ್ಪ ಕಠೋರವಾಗಿ ಮಾತನಾಡುತ್ತೇನೆ. ಕಾರಣ ಇದು ಬ್ಯಾಂಕಿಂಗ್ ವಲಯ. ಇಲ್ಲಿ ನಾವು ಜನರೊಂದಿಗೆ ವ್ಯವಹರಿಸುತ್ತೇವೆ. ನೀವು ಅವರನ್ನು, ಅವರ ಭಾಷೆಯನ್ನು ಗೌರವಿಸುವುದು ಅತಿ ಮುಖ್ಯ ಎಂದು ಹಣಕಾಸು ಸಚಿವರು ಹೇಳಿದರು.
ಕೆಲ ದಿನಗಳ ಹಿಂದೆ ಕನ್ನಡದಲ್ಲಿ ಬರೆದ ಕಾಸೋಲೆ(ಚೆಕ್)ಯನ್ನು ಅಮಾನ್ಯ ಮಾಡಿದ ಧಾರವಾಡ ಜಿಲ್ಲೆಯ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 85 ಸಾವಿರ ರೂಪಾಯಿ ದಂಡವನ್ನು ಹಾಕಿ ಆದೇಶಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಓದಿ: ಧಾರವಾಡ: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ