ಹಮೀರ್ಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಮೀರ್ಪುರದಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಮಾದರಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶಕ್ಕೆ ತೆರಳಿದ್ದ ವಿದ್ಯಾರ್ಥಿನಿಯ ಮೇಲೆ ಆರು ಮಂದಿ ಕಾಮುಕರು ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲ, ಆಕೆಯನ್ನು ಬೆತ್ತಲೆ ಮಾಡಿ ಥಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆರು ಮಂದಿ ಒಟ್ಟಿಗೆ ಸೇರಿ ವಿದ್ಯಾರ್ಥಿನಿಯೋರ್ವಳನ್ನು ಬೆತ್ತಲೆ ಮಾಡಿದ್ದು, ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ಹೇಳಲಾಗ್ತಿದೆ. ಹಮೀರ್ಪುರ್ ಸಿಟಿ ಫಾರೆಸ್ಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಕೈಯಲ್ಲಿ ಬೆಲ್ಟ್ ಹಾಗೂ ದೊಣ್ಣೆ ಹಿಡಿದು, ಯುವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದೊಂದು ಸಾಮೂಹಿಕ ಅತ್ಯಾಚಾರದಂತಹ ಘೋರ ಅಪರಾಧ ಎಂದು ಹೇಳಲಾಗ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಮೀರ್ಪುರ ಪೊಲೀಸ್ ವರಿಷ್ಠಾಧಿಕಾರಿ ರವಿ ಪ್ರಕಾಶ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ, ಅತ್ಯಾಚಾರ ಆರೋಪಿಯ ಹಿಡಿದು ಕೊಂದು ಶವ ತೆಗೆದುಕೊಂಡು ಹೋಗಲು ಪೊಲೀಸರಿಗೆ ಜನರ ಫೋನ್
ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಹಮೀರ್ಪುರ್ ಅರಣ್ಯ ಪ್ರದೇಶಕ್ಕೆ ತೆರಳಿದ್ದಳು. ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಮಾತನಾಡ್ತಿದ್ದಾಗ ಕೆಲವರು ಅಲ್ಲಿಗೆ ಆಗಮಿಸಿದ್ದಾರೆ. ಜೊತೆಗೆ ವಿದ್ಯಾರ್ಥಿ ಮೇಲೆ ದುಷ್ಕೃತ್ಯವೆಸಗಿದ್ದಾರೆ ಎನ್ನಲಾಗ್ತಿದೆ. ಘಟನೆಯ ಬೆನ್ನಲ್ಲೇ ಬಾಲಕಿ ನಾಪತ್ತೆಯಾಗಿದ್ದು, ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಹಯ್ಯಾ ಶರ್ಮಾ (42), ಪ್ರೀತಮ್ ಶರ್ಮಾ (18) ಮತ್ತು ಮೊಹಮ್ಮದ್ ಫೈಜಲ್ (17) ಎಂಬಾತನ ಬಂಧನವಾಗಿದೆ. ಇವರೆಲ್ಲರೂ ಗೌರಾದೇವಿ ಗ್ರಾಮದ ನಿವಾಸಿಗಳು ಎಂದು ಹೇಳಲಾಗ್ತಿದೆ.
ಇಂದು ಬೆಳಗ್ಗೆಯಷ್ಟೇ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ 12 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ಆಕೆ ಗರ್ಭಿಣಿಯಾಗಿರುವುದು ಗೊತ್ತಾಗುತ್ತಿದ್ದಂತೆ ಥಳಿಸಿ ವೈದ್ಯರಿಂದ ಗರ್ಭಪಾತ ಮಾಡಿಸಿದ್ದರು.